ಚಿಕ್ಕಮಗಳೂರು: ಕಂದಾಯ ಇಲಾಖೆ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿರುವ ಗಂಭೀರ ಆರೋಪವೊಂದು ಕಾಫಿನಾಡಿನಲ್ಲಿ ಕೇಳಿಬಂದಿದೆ. ತಾಲ್ಲೂಕಿನ ಅಂಬಳೆ ಹೋಬಳಿಯ ಕದ್ರಿಮಿದ್ರಿ ಗ್ರಾಮದಲ್ಲಿರುವ ಜಮೀನಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚಿಸಲಾಗಿದೆ ಎಂದು ಆರೋಪಿಸಿ ಸಂಗಮೇಶ್ವರ ಪೇಟೆ ನಿವಾಸಿ ಎಸ್. ವೈ ಮುಕ್ತಿಯಾರ್ ಅಹಮದ್ ಅವರು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದಾರೆ.
1965ರಲ್ಲಿ ಅಬ್ದುಲ್ ಕರೀಂ ಎಂಬುವವರಿಗೆ ಮಂಜೂರಾಗಿದ್ದ 8 ಎಕರೆ ಜಮೀನಿನನ್ನು, 1992ರಲ್ಲಿ ಮುಕ್ತಿಯಾರ್ ಖರೀದಿ ಮಾಡಿ ಸಾಗುವಳಿ ಮಾಡುತ್ತಿದ್ದರು. ಆದರೆ ಕುಟುಂಬಕ್ಕೆ ದಿಢೀರನೆ ಎದುರಾದ ಆರ್ಥಿಕ ಸಂಕಷ್ಟದಿಂದ 5.5 ಎಕರೆ ಜಮೀನನ್ನು ಮಾರಾಟ ಮಾಡಿ ಉಳಿದ 2.20 ಎಕರೆ ಜಮೀನನ್ನು ತಮ್ಮ ಸ್ವಾಧೀನದಲ್ಲಿ ಇರಿಸಿಕೊಂಡಿದ್ದರು. 2017-18ರ ವರೆಗೂ ಪಹಣಿ ಹಾಗೂ ಭೂ ದಾಖಲೆಗಳು ಮುಕ್ತಿಯಾರ್ ಹೆಸರಿನಲ್ಲೇ ಇದ್ದವು. ಆದರೆ ನುಂಗಣ್ಣನೋರ್ವ ಇವರ ಆಸ್ತಿಯ ಫೋರ್ಜರಿ ದಾಖಲೆಗಳನ್ನು ಸೃಷ್ಟಿಸಿ, 2018-19ನೇ ಸಾಲಿನಿಂದ ಪಹಣಿಯಲ್ಲಿ ವೇಣುಗೋಪಾಲ್ ಎಂಬ ಹೆಸರನ್ನು ನಮೂದಿಸಿ ವಂಚಿಸಿದ್ದಾನೆ. ಈ ಅನ್ಯಾಯದ ವಿರುದ್ಧ ಅವರು ಹೈಕೋರ್ಟ್ ಮೆಟ್ಟಿಲೇರಿದ್ದು, 2021ರ ಜನವರಿಯಲ್ಲಿ ನ್ಯಾಯಾಲಯವು ಜಿಲ್ಲಾಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದರೂ ಇದುವರೆಗೆ ಯಾವುದೇ ಕ್ರಮವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮಗೆ ಈಗ 74 ವರ್ಷ ವಯಸ್ಸಾಗಿದ್ದು, ನ್ಯಾಯಾಲಯ ಹಾಗೂ ಕಚೇರಿಗಳಿಗೆ ಅಲೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರು ಮಧ್ಯಪ್ರವೇಶಿಸಿ ತನಿಖೆ ನಡೆಸಬೇಕು, ನಕಲಿ ದಾಖಲೆ ಸೃಷ್ಟಿಸಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಮತ್ತು ಪಹಣಿಯಲ್ಲಿ ಪುನಃ ತಮ್ಮ ಹೆಸರನ್ನು ಸೇರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
Kshetra Samachara
02/02/2026 08:34 pm
LOADING...