ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿಯಲ್ಲಿ ಬೃಹತ್ ವಿರಾಟ್ ಹಿಂದೂ ಸಮಾವೇಶ – ಕೇಸರಿ ಕಂಗೊಳಿನಲ್ಲಿ ಪಟ್ಟಣ!

ಅಥಣಿ :ಪಟ್ಟಣದಲ್ಲಿ ಬೃಹತ್ ವಿರಾಟ್ ಹಿಂದೂ ಸಮಾವೇಶ ಅದ್ಧೂರಿಯಾಗಿ ನಡೆಯಿತು. ಹಿಂದೂ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಈ ಸಮಾವೇಶಕ್ಕೆ ಅಥಣಿ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಹಿಂದೂ ಕಾರ್ಯಕರ್ತರು ಹರಿದುಬಂದರು. ಸಮಾವೇಶದ ಭಾಗವಾಗಿ ಅಥಣಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೇಸರಿ ಧ್ವಜಗಳೊಂದಿಗೆ ಭವ್ಯ ಮೆರವಣಿಗೆ ಸಂಚರಿಸಿ ಜನರ ಗಮನ ಸೆಳೆಯಿತು.

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯದ ಪ್ರಮುಖ ಉಸ್ತುವಾರಿಗಳಲ್ಲೊಬ್ಬರಾದ ಗೋಪಾಲ್ ಬಾಗಿ ಅವರು ಈ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಶ್ರೀರಾಮ ಮಂದಿರ ನಿರ್ಮಾಣವು ಕೇವಲ ಒಂದು ಧಾರ್ಮಿಕ ಕಾರ್ಯವಲ್ಲ, ಅದು ಶತಮಾನಗಳ ಹೋರಾಟದ ಫಲವಾಗಿದ್ದು, ಹಿಂದೂ ಸಮಾಜದ ಆತ್ಮಗೌರವದ ಪ್ರತೀಕವಾಗಿದೆ ಎಂದು ಅವರು ಹೇಳಿದರು. ಹಿಂದೂ ಸಂಸ್ಕೃತಿ, ಸಂಪ್ರದಾಯ ಮತ್ತು ಏಕತೆ ಉಳಿಸಿಕೊಳ್ಳಲು ಯುವ ಪೀಳಿಗೆಯ ಪಾತ್ರ ಅತ್ಯಂತ ಮಹತ್ವದ್ದೆಂದು ಅವರು ಕರೆ ನೀಡಿದರು.

ಮೆರವಣಿಗೆಯಲ್ಲಿ ರಾಮನಾಮ ಘೋಷಣೆಗಳು, ಭಜನೆಗಳು, ಧಾರ್ಮಿಕ ಘೋಷವಾಕ್ಯಗಳು ಮೊಳಗಿದವು. ಕೇಸರಿ ವಸ್ತ್ರ ಧರಿಸಿದ ಕಾರ್ಯಕರ್ತರು ಶಿಸ್ತಿನಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಪಟ್ಟಣದ ವಾತಾವರಣ ಸಂಪೂರ್ಣ ಭಕ್ತಿಮಯವಾಗಿ ಮಾರ್ಪಟ್ಟಿತ್ತು. ಮೆರವಣಿಗೆ ವೇಳೆ ಪ್ರಮುಖ ಬೀದಿಗಳಲ್ಲಿ ಜನರು ನಿಂತು ಕೇಸರಿ ಸಾಗರವನ್ನು ವೀಕ್ಷಿಸಿ, ಕೆಲವೆಡೆ ಪುಷ್ಪವೃಷ್ಠಿ ಮಾಡುವ ಮೂಲಕ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಸಮಾವೇಶದಲ್ಲಿ ಸುಮಾರು 4,000ಕ್ಕೂ ಅಧಿಕ ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದು, ಇದು ಇತ್ತೀಚಿನ ದಿನಗಳಲ್ಲಿ ಅಥಣಿಯಲ್ಲಿ ನಡೆದ ಅತ್ಯಂತ ದೊಡ್ಡ ಧಾರ್ಮಿಕ ಸಮಾವೇಶವೆಂದು ಹೇಳಲಾಗುತ್ತಿದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್ ಇಲಾಖೆಯಿಂದ ಕಠಿಣ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ, ಮೆರವಣಿಗೆ ಮತ್ತು ಸಮಾವೇಶವನ್ನು ಶಾಂತಿಯುತವಾಗಿ ನಡೆಸಲಾಯಿತು.

ವಿರಾಟ್ ಹಿಂದೂ ಸಮಾವೇಶವು ಅಥಣಿಯಲ್ಲಿ ಧಾರ್ಮಿಕ ಉತ್ಸಾಹ, ಸಂಘಟನೆ ಮತ್ತು ಏಕತೆಯ ಪ್ರದರ್ಶನವಾಗಿ ಮೂಡಿ ಬಂತು.

Edited By : PublicNext Desk
Kshetra Samachara

Kshetra Samachara

02/02/2026 10:25 pm

Cinque Terre

2.88 K

Cinque Terre

0

ಸಂಬಂಧಿತ ಸುದ್ದಿ