ಬೆಂಗಳೂರು: ದೇಶದ ಹಲವು ರಾಜ್ಯಗಳಲ್ಲಿ ನಿಫಾ ವೈರಸ್ ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಸಂಪೂರ್ಣ ಕಟ್ಟೆಚ್ಚರ ವಹಿಸಿದೆ.
ಸೋಂಕಿತ ಬಾವಲಿಗಳು ತಿಂದ ಹಣ್ಣುಗಳನ್ನು ಸೇವಿಸುವುದರಿಂದ ಅಥವಾ ಹಂದಿಗಳ ಮಾಂಸವನ್ನು ತಿನ್ನುವುದರಿಂದ ಈ ವೈರಸ್ ಹೆಚ್ಚಾಗಿ ಹರಡುತ್ತದೆ. ಅಲ್ಲದೆ, ಕೆಲವೊಮ್ಮೆ ಮನುಷ್ಯರಿಂದ ಮನುಷ್ಯರಿಗೂ ಇದು ಹರಡುವ ಸಾಧ್ಯತೆಯಿದೆ.
ನಿಫಾ ಸೋಂಕಿತರಲ್ಲಿ ಮರಣ ಪ್ರಮಾಣ ಶೇ. 60 ರಿಂದ 75 ರಷ್ಟಿರುವ ಅತ್ಯಂತ ಅಪಾಯಕಾರಿ ಅಂಶದಿಂದಾಗಿ, ರಾಜ್ಯದಲ್ಲಿ ಈ ವೈರಸ್ ಪ್ರವೇಶಿಸದಂತೆ ಆರೋಗ್ಯ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಶಂಕಿತ ಪ್ರಕರಣಗಳ ಬಗ್ಗೆ ನಿಗಾ ವಹಿಸಲು ಆರೋಗ್ಯ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.
ನಿಫಾ ಸೋಂಕಿನ ಲಕ್ಷಣಗಳು
* ಜ್ವರ
* ಮೈ ಕೈ ನೋವು
* ಸುಸ್ತು
* ತಲೆನೋವು
* ಶೀತ
* ಗಂಟಲು ಕೆರೆತ ಅಥವಾ ಗಂಟಲಿನಲ್ಲಿ ನೋವು
* ಕುತ್ತಿಗೆಯ ಹಿಂದಿನ ಭಾಗದಲ್ಲಿ ಸೆಳೆತ
ಸಾರ್ವಜನಿಕರಿಗೆ ಸೂಚನೆಗಳು!
ಆಗ್ನೇಯ ಏಷ್ಯಾದ ಹಲವು ದೇಶಗಳಲ್ಲಿ ನಿಫಾ ವೈರಸ್ ಆತಂಕ ಸೃಷ್ಟಿಸಿರುವ ಹಿನ್ನೆಲೆಯಲ್ಲಿ, ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ಬಾವಲಿಗಳು ಹೆಚ್ಚಿರುವ ಪ್ರದೇಶಗಳಲ್ಲಿ ಸಂಚರಿಸುವುದನ್ನು ತಪ್ಪಿಸಿ, ಮರಗಳಿಂದ ತೆಗೆಯುವ 'ನೀರಾ' ಸೇವನೆಯಿಂದ ಸದ್ಯಕ್ಕೆ ದೂರವಿರಿ.
ಅಲ್ಲದೆ, ಬಾವಲಿಗಳು ಕಚ್ಚಿದ ಅಥವಾ ತಿಂದ ಹಣ್ಣುಗಳನ್ನು ಸೇವಿಸದಂತೆ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ನಿರ್ದೇಶನ ನೀಡಿದೆ.
PublicNext
02/02/2026 10:38 pm
LOADING...