ಬೆಂಗಳೂರು: ಜ್ಯೋತಿಷಿ ಕಮಲಾಕರ್ ಭಟ್ ಅವರ ಅಕ್ರಮ ಸಂಬಂಧದ ಪ್ರಕರಣ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಈ ವಿಚಾರವಾಗಿ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ವಿರುದ್ಧ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
"ಕೊಲೆ ಆರೋಪಿ ಜ್ಯೋತಿಷಿ 'ಗುರೂಜಿ' ಕಮಲಾಕರ್ ಭಟ್‌ನನ್ನು ಓರ್ವ ಶಾಸಕನಾಗಿ ಪ್ರೋತ್ಸಾಹಿಸಿ ಬೆಳೆಸಿದ್ದು ಸಂವಿಧಾನಕ್ಕೆ ಮಾಡುವ ಅಪಚಾರವಲ್ಲವೇ?" ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಕಮಲಾಕರ್ ಭಟ್ ಪ್ರಕರಣದ ಹಿನ್ನೆಲೆ
ಈ ಪ್ರಕರಣ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್' ಪೋಸ್ಟ್ ಮಾಡಿರುವ ಹರಿಪ್ರಸಾದ್, ಕಾರವಾರದ ಸಿದ್ದಾಪುರದಲ್ಲಿ ಜ್ಯೋತಿಷಿ ಕಮಲಾಕರ್ ಭಟ್ ಅವರ ಅಕ್ರಮ ಸಂಬಂಧಕ್ಕೆ 41 ವರ್ಷದ ಅಮಾಯಕ ವಸಂತ್ ನಾಯ್ಕ್ ಬಲಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕ್ರಿಮಿನಲ್ ಪ್ರಕರಣದ ನ್ಯಾಯಯುತ ತನಿಖೆ ನಡೆದು, ನ್ಯಾಯಾಲಯ ತೀರ್ಪು ನೀಡಲಿದೆ. ಆದರೆ, ಇಂತಹ ಪ್ರಕರಣಗಳಲ್ಲಿ ಸಂಘಪರಿವಾರದ ಹಿನ್ನಲೆಯಿಂದ ಬಂದ ಬಿಜೆಪಿಯ ಸುರೇಶ್ ಕುಮಾರ್, ಬಿ.ವೈ. ವಿಜಯೇಂದ್ರ ಅಂತಹ ಜನಪ್ರತಿನಿಧಿಗಳ ಪಾತ್ರವೇನು ಎಂಬುದು ಸ್ವಸ್ಥ ಸಮಾಜದ ದೃಷ್ಟಿಯಿಂದ ಮುಖ್ಯವಾಗುತ್ತದೆ ಎಂದಿದ್ದಾರೆ.
ಸುರೇಶ್ ಕುಮಾರ್ ಪಾತ್ರದ ಬಗ್ಗೆ ತೀವ್ರ ಪ್ರಶ್ನೆ
ಕಮಲಾಕರ್ ಭಟ್ ಭಾಗಿಯಾದ ಕೊಲೆ ಪ್ರಕರಣದಲ್ಲಿ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಅವರ ಪಾತ್ರವಿಲ್ಲವೇ? ಒಬ್ಬ ಮಾಜಿ ಕಾನೂನು ಸಚಿವನಿಗೆ ಇಷ್ಟೂ ಅರಿವಿಲ್ಲದಿರುವುದು ರಾಜ್ಯದ ದುರಂತ ಎಂದು ಹರಿಪ್ರಸಾದ್ ಟೀಕಿಸಿದ್ದಾರೆ.
ಕೊಲೆಗಡುಕ ಹಾಗೂ ಮಹಿಳಾ ಪೀಡಕ ಕಮಲಾಕರ್ ಭಟ್ ತನ್ನಲ್ಲಿಗೆ ಜ್ಯೋತಿಷ್ಯ ಕೇಳಲು ಬರುವ ಗ್ರಾಹಕರನ್ನು ಲೈಂಗಿಕವಾಗಿ ಶೋಷಿಸುತ್ತಿದ್ದ. ಅದರ ಭಾಗವಾಗಿಯೇ ಮಹಿಳೆಯೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿ, ಅದು ಕೊಲೆಯವರೆಗೂ ಹೋಗಿದೆ.
ಈ ರೀತಿ ಜನರ ಮೂಢನಂಬಿಕೆಗಳನ್ನು ಬಳಸಿಕೊಂಡು ಹಲವು 'ಅಕ್ರಮ'ಗಳನ್ನು ಸಂಪಾದಿಸಿ, ಇಂತಹ "ಜೀ-ಗುರೂಜಿ"ಗಳು ಸಮಾಜ ಸೇವೆಯ ಹೆಸರಿನಲ್ಲಿ ಸಮಾಜವನ್ನೇ ಯಾಮಾರಿಸುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
04/02/2026 08:01 pm