ನಂಜನಗೂಡು: ನಗರದ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಸಮೀಪವಿರುವ ಹೆಜ್ಜಿಗೆ ಗ್ರಾಮದ ಬಳಿಯ ಕಪಿಲಾ ನದಿ ತೀರದಲ್ಲಿ ದಶಕಗಳಿಂದ ಬೆಳೆದ ನಿಂತಿದ್ದ ಬೃಹತ್ ಮರಗಳನ್ನು ಕಡಿದು ಹಾಕುತ್ತಿದ್ದರೂ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದು, ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮಸ್ಥರ ಪ್ರಕಾರ ಕಪಿಲಾ ನದಿ ತೀರದ ಸ್ಥಳದಲ್ಲಿ ಗ್ರಾಮದ ಯಾರೇ ಮೃತಪಟ್ಟರೂ ಹೂಳುವ ಸ್ಮಶಾನ ಸ್ಥಳವಾಗಿದೆ ಎನ್ನುತ್ತಾರೆ.
ಹೆಜ್ಜಿಗೆ ಗ್ರಾಮದ ಕಪಿಲಾ ನದಿ ತೀರದಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ನೆರಳೆ, ಮತ್ತಿ ಸೇರಿದಂತೆ 46ಕ್ಕೂ ಹೆಚ್ಚು ಬೆಲೆ ಬಾಳುವ ಮರಗಳನ್ನು ರಾಜಕೀಯ ಪ್ರಭಾವ ಬಳಸಿ ಅಕ್ರಮವಾಗಿ ಕಡಿದು ಲಕ್ಷಾಂತರ ಹಣ ಲೂಟಿ ಮಾಡುತ್ತಿದ್ದಾರೆ. ಪ್ರಸ್ತುತ ಮರಗಳನ್ನು ಕಡಿದಿರುವ ಜಾಗವು ನೀರಾವರಿ ಇಲಾಖೆಗೆ ಸೇರಿದ ಸರ್ಕಾರಿ ಜಾಗವಾಗಿದೆ.
ಅಕ್ರಮವಾಗಿ ಮರಗಳನ್ನು ಕಡಿದು ಹಾಕುತ್ತಿದ್ದಾರೆ ಎಂಬ ಮಾಹಿತಿ ತಿಳಿದಿದ್ದರೂ ಕೂಡ ಕಂದಾಯ ಇಲಾಖೆ, ಅರಣ್ಯ ಇಲಾಖೆ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಶನಿವಾರ ಮಧ್ಯಾಹ್ನ ಮರ ಕಡಿಯುತ್ತಿರುವ ವಿಷಯ ತಿಳಿಯುತ್ತಿದ್ದಂತೆ ನೆಪ ಮಾತ್ರಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರ ಕಟಾವು ಮಾಡುವ ಯಂತ್ರಗಳನ್ನು ವಶಕ್ಕೆ ಪಡೆದು ಸುಮ್ಮನಾಗಿದ್ದಾರೆ. ಸ್ಥಳದಲ್ಲಿ ಮರಗಳನ್ನು ತುಂಬಿ ನಿಲ್ಲಿಸಿದ್ದ ಟ್ರಾಕ್ಟರ್ ವಶಕ್ಕೆ ಪಡೆಯದೆ ಮತ್ತೆ ಕಚೇರಿಗೆ ಹೇಳಿದ್ದಾರೆ. ಸಂಜೆ ನಾಲ್ಕರ ಬಳಿಕ ಮಹಜರು ಮಾಡಲು ತೆರಳಿದ ಸಂದರ್ಭದಲ್ಲಿ ಸ್ಥಳದಲ್ಲಿ ಮರ ತುಂಬಿ ನಿಲ್ಲಿಸಿದ್ದ ಟ್ರಾಕ್ಟರ್ ನಾಪತ್ತೆಯಾಗಿದೆ. ಮರ ತುಂಬಿದ್ದ ಟ್ರಾಕ್ಟರ್ ಹೆಜ್ಜಿಗೆ ಗ್ರಾಮದ ವ್ಯಕ್ತಿ ಒಬ್ಬರ ಮನೆ ಬಳಿ ನಿಂತಿದ್ದು ಕೇಳಲು ಹೋದ ಅರಣ್ಯ ಇಲಾಖೆ ಸಿಬ್ಬಂದಿಯ ವಿರುದ್ಧ ರಾಜಕೀಯ ಬಳಸಿ ವಾಪಸ್ ಕಳಿಸಿದ್ದಾರೆ ಎಂದು ತಿಳಿದುಬಂದಿದೆ.
ಸರ್ಕಾರಿ ಜಾಗದಲ್ಲಿ ಬೆಳೆದಿದ್ದ ಮರಗಳನ್ನು ಕಡಿಯಲು ಇವರಿಗೆ ಅಧಿಕಾರ ನೀಡಿದವರು ಯಾರು ಎಂಬ ಪ್ರಶ್ನೆ ಕಾಡುತ್ತಿದೆ. ಅಕ್ರಮ ಮರ ಸಾಗಾಣಿಕೆಗೆ ಅಧಿಕಾರಿಗಳು ಕೂಡ ಸಾತ್ ನೀಡಿದ್ದಾರೆ ಎಂಬುದನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದು, ರಾಜಕೀಯ ಪ್ರಭಾವಿತ ವ್ಯಕ್ತಿಗಳು ಅಧಿಕಾರಿಗಳಿಗೆ ಹೆದರದೆ ಇಂತಹ ದುಷ್ಕೃತ್ಯಕ್ಕೆ ಮುಂದಾಗಿದ್ದು ಸಂಬಂಧಪಟ್ಟ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳುವರೇ ಎಂಬುದು ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳ ಪ್ರಶ್ನೆಯಾಗಿದೆ.
PublicNext
08/03/2026 04:46 pm