ಚಿತ್ರದುರ್ಗ: ನಗರ ಜೋಗಿಮಟ್ಟಿ ರಸ್ತೆ, ಚಳ್ಳಕೆರೆ ತಾಲ್ಲೂಕಿನ ದೊಡ್ಡೇರಿ, ಯಲಗಟ್ಟೆ ಸೇರಿ ನಾನಾ ಕಡೆ ಸುಣ್ಣದ ಬಟ್ಟಿಗಳು ಇವೆ. ಇದನ್ನೇ ನಂಬಿ, ಹಲವು ಕುಟುಂಬಗಳು ಜೀವನ ಸಾಗಿಸುತ್ತಿವೆ. ಆದರೆ, ಸುಣ್ಣಕ್ಕೆ ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ಸುಣ್ಣಗಾರರ ಬದುಕು ಸಂಕಷ್ಟ ಸಿಲುಕಿದೆ.
ಸುಣ್ಣ ತಯಾರಕರು ತಾಲ್ಲೂಕಿನ ನಾಯಕನಹಟ್ಟಿ ಗೌಡಗೆರೆಯಿಂದ ಸುಣ್ಣದ ಕಲ್ಲು ತರಿಸಿಕೊಂಡು ತಮ್ಮ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಕಲ್ಲಿಗೆ ಭಾರಿ ಬೇಡಿಕೆ ಇದ್ದು, ಇದೇ ಕಲ್ಲು ಸುಣ್ಣಗಾರರ ಜೀವನಕ್ಕೆ ಆಧಾರವಾಗಿದೆ. ಆದರೆ ಈ ಕಲ್ಲು ತರಬೇಕಾದರೆ ಸುಮಾರು ಒಂದು ಟ್ಯಾಕ್ಟರ್‌ಗೆ 4 ರಿಂದ 5 ಸಾವಿರ ರೂ. ನೀಡಬೇಕು. ಹರಳು ಸುಡಲು ಇದ್ದಿಲು ಕಟ್ಟಿಗೆ ಬೇಕು. ಈಗೀಗ ಇದ್ದಿಲು ಸಿಗುತ್ತಿಲ್ಲ. ಸುಣ್ಣಗಾರರು ಇಷ್ಟೆಲ್ಲ ಕಷ್ಟಪಟ್ಟು ಸುಣ್ಣ ತಯಾರಿಸಿದರೂ ಬೇಡಿಕೆ ಬಹಳಷ್ಟು ಇಲ್ಲ. ಬೆಲೆಯೂ ಸೇರು ಸುಣ್ಣಕ್ಕೆ 10 ರಿಂದ 12 ರೂ. ಇದೆ. ಮಣ್ಣಿನ ಮನೆಗಳ ಸಂಖ್ಯೆ ಕುಸಿದಿದೆ. ಸಿಮೆಂಟ್ ಮನೆಗಳು ಇದ್ದರೂ ಸುಣ್ಣ ಬಳಿಯುವವರು ಅಪರೂಪವಾಗಿದ್ದಾರೆ. ಮಾರುಕಟ್ಟೆಗಳಲ್ಲಿ ನಾನಾ ಬಗೆಯ ಬಣ್ಣ ಸಿಗುತ್ತಿದೆ. ಇದನ್ನು ತಂದು ಹಚ್ಚಲು ಎಲ್ಲರೂ ಉತ್ಸುಕರಾಗುತ್ತಿದ್ದಾರೆ. ಹೀಗಾಗಿ ಬಟ್ಟಿಗಳಿಗೆ ಬೇಡಿಕೆ ಕಡಿಮೆಯಾಗಿದೆ.
ಇತ್ತೀಚಿನ ದಿನಗಳಲ್ಲಿ ಅಡಿಕೆ ಗಿಡಗಳಿಗೆ ಸೂರ್ಯನ ಕಿರಣಗಳ ರಕ್ಷಣೆಗೆ ಸುಣ್ಣ ಬಳಿಯುವುದರಿಂದ ಸುಟ್ಟ ಸುಣ್ಣ ಮಾರಾಟವಾಗಿ ಜೀವನ ಸಾಗಿಸುತ್ತಿದ್ದೇವೆ. ಆದರೂ ಹರಳು ಸುಟ್ಟು, ಸುಣ್ಣ ತೆಗೆದಷ್ಟು ಕೂಲಿ ಸಿಗದೇ ಇರುವುದರಿಂದ ನಮ್ಮ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಸುಣ್ಣದ ಬಟ್ಟಿ ನಡೆಸುವ ಕುಟುಂಬಗಳಿಗೆ ಸರ್ಕಾರಿ, ಪ್ರೋತ್ಸಾಹ ಧನ ನೀಡುವ ಮೂಲಕ ಕೈಹಿಡಿಯಬೇಕಿದೆ ಎನ್ನುತ್ತಾರೆ ಸುಣ್ಣಗಾರರಾದ ರಾಜಣ್ಣ, ತಿಪ್ಪೇಸ್ವಾಮಿ .
PublicNext
10/03/2026 02:52 pm
LOADING...