ಮೊಳಕಾಲ್ಮೂರು:ಬೇಸಿಗೆ ಕಾಲ ಆಗಮಿಸುತ್ತಿದ್ದು, ತಾಲೂಕಿನ 16 ಗ್ರಾಪಂ ವ್ಯಾಪ್ತಿಯ ಯಾವುದೇ ಗ್ರಾಮದಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಗ್ರಾಪಂ ಪಿಡಿಒಗಳ ಶಾಸಕ ಎನ್.ವೈ.ಗೋಪಾಲಕೃಷ್ಣ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಮಂಗಳವಾರ ತಾಪಂನಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ಗ್ರಾಪಂ ಆಡಳಿತಾಧಿಕಾರಿಗಳು ಹಾಗೂ ಪಿಡಿಒಗಳ ಸಭೆಯಲ್ಲಿ ಮಾತನಾಡಿದರು.
ಎಲ್ಲಾ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿಯೂ ಸಂಭವನೀಯ ನೀರಿನ ಸಮಸ್ಯೆಯನ್ನು ಗುರುತಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಸಮಸ್ಯೆ ಚಿಕ್ಕದು ಎಂದು ಬೇಜವಬ್ದಾರಿತನದಿಂದ ವರ್ತಿಸಬಾರದು. ಬಹುತೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇಲ್ಲದಿದ್ದರೂ ನಿರ್ವಹಣೆಯ ಕೊರತೆಯಿಂದ ಸಮಸ್ಯೆ ಕಾಣುವಂತಾಗಿದೆ. ಇದನ್ನು ಇಂದಿನಿಂದಲೇ ಸರಿಪಡಿಸಬೇಕು ಎಂದು ಸೂಚಿಸಿದರು.
ಸ್ಥಳೀಯ ಅಧಿಕಾರಿಗಳ ಕೈಯಲ್ಲಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದಲ್ಲಿ ಕೂಡಲೇ ಸಮಸ್ಯೆಯನ್ನು ನನ್ನ ಗಮನಕ್ಕೆ ತರುವುದು ಖಡ್ಡಾಯವಾಗಿದೆ. ಗ್ರಾಮದಲ್ಲಿನ ಮೂಲಭೂತ ಸೌಕರ್ಯಗಳ ಕೊರತೆಯನ್ನು ನಿವಾರಿಸುವುದು ನಿಮ್ಮಗಳ ಜವಾಬ್ದಾರಿಯಾಗಿದೆ. ಗ್ರಾಮದಲ್ಲಿ ಚರಂಡಿ, ಕಸ ವಿಲೇವಾರಿ, ನೀರಿನ ಸರಬರಾಜು, ಬೀದಿ ದೀಪಗಳ ನಿರ್ವಹಣೆಗಳನ್ನು ಸಮರ್ಪಕವಾಗಿ ಕೈಗೊಳ್ಳಬೇಕು ಎಂದರು.
ನಾನು ರಾಜಕೀಯ ಪ್ರವೇಶಿಸಿದ ದಿನದಿಂದಲೂ ಅವರಿವರು ಹೇಳುತ್ತಾರೆ ಎಂದು ಕೆಲಸಗಳನ್ನು ಮಾಡುವುದಿಲ್ಲ. ಅಭಿವೃದ್ಧಿ, ಕಾರ್ಯಗಳಿಗೆ ನಾನು ಹಿಂದಿನಿಂದಲೂ ಸಂಧಿಸಿದ್ದೇನೆ ಹಾಗೂ ಮುಂದಿನ ದಿನದಲ್ಲಿಯೂ ಸಂಧಿಸುತ್ತೇನೆ. ಈ ವಿಷಯದಲ್ಲಿ ನಾನು ಹೇಳಿಕೆ ಮಾತು ಕೇಳುವುದಿಲ್ಲ ಎಂದು ತಿಳಿಸಿದರು.
ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಸರಕಾರಿ ಬಸ್ ನಿಲ್ದಾಣ ಕಾಮಗಾರಿಯು ಇನ್ನೂ ಪೂರ್ಣಗೊಂಡಿಲ್ಲ. ಈ ಕಾಮಗಾರಿಗೆ ಅನುದಾನದ ಕೊರತೆ ಏರ್ಪಟ್ಟ ಹಿನ್ನಲೆಯಲ್ಲಿ ನಾನು ಸಾರಿಗೆ ಸಚಿವರ ಜೊತೆ ಮಾತನಾಡಿದ್ದೇನೆ. ಮುಂದಿನ ದಿನದಲ್ಲಿ ಈ ಬಸ್ ನಿಲ್ದಾಣ ಕಾಮಗಾರಿ ಪೂರ್ಣವಾಗಲು ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಗುತ್ತಿಗೆದಾರರು ಇಲಾಖೆಗೆ ಹಸ್ತಾಂತರಿಸಿದ ನಂತರ ಉದ್ಘಾಟನೆ ಮಾಡಲಾಗುವುದು ಎಂದರು.
ಸಭೆಯಲ್ಲಿ ತಹಸೀಲ್ದಾರ್ ಟಿ.ಜಗದೀಶ್, ತಾಪಂ ಇಒ ಎಚ್.ಹನುಮಂತಪ್ಪ, ಸಿಪಿಐ ಆರ್.ನಾಗರಾಜ್, ಗ್ರಾಪಂಗಳ ಪಿಡಿಓಗಳು ಇದ್ದರು.
Kshetra Samachara
17/03/2026 06:32 pm