ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

UPSCನಲ್ಲಿ ಸಾಧನೆಗೈದ ಮನೋಜ್‌ಗೆ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದಿಂದ ಅಭಿನಂದನೆ.

ಸಕಲೇಶಪುರ :ಕೇಂದ್ರ ಸರ್ಕಾರದ ಅತ್ಯುನ್ನತ ಸ್ಪರ್ಧಾತ್ಮಕ ಪರೀಕ್ಷೆಯಾದ UPSC ಪರೀಕ್ಷೆಯಲ್ಲಿ 389ನೇ ರ್ಯಾಂಕ್ ಪಡೆದಿರುವ ಮನೋಜ್ ಅವರನ್ನು ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಪರಮೇಶ್, ಗೌರವ ಕಾರ್ಯದರ್ಶಿ ಲೋಹಿತ್ ಕೌಡಳ್ಳಿ,ಕಸಬಾ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಕೆವಿ ಮೇಘರಾಜ್, ಸದಸ್ಯರಾದ ಅರುಣ್ ಹಾಗೂ ಸಂಘದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದು, ಮನೋಜ್ ಅವರ ಸಾಧನೆಯನ್ನು ಶ್ಲಾಘಿಸಿದರು. ಗ್ರಾಮೀಣ ಹಿನ್ನೆಲೆಯಲ್ಲಿಯೇ ಬೆಳೆದ ಒಬ್ಬ ಯುವಕ ತನ್ನ ಕಠಿಣ ಪರಿಶ್ರಮ ಮತ್ತು ಅಚಲ ಸಂಕಲ್ಪದ ಮೂಲಕ ದೇಶದ ಪ್ರಮುಖ ಸೇವಾ ಕ್ಷೇತ್ರಕ್ಕೆ ಆಯ್ಕೆಯಾಗಿರುವುದು ಜಿಲ್ಲೆಯ ಹೆಮ್ಮೆಯ ಸಂಗತಿ ಎಂದು ಅವರು ಅಭಿಪ್ರಾಯಪಟ್ಟರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮನೋಜ್, “ನನ್ನ ಈ ಸಾಧನೆಗೆ ನನ್ನ ತಂದೆ-ತಾಯಿ ಹಾಗೂ ಗುರು ಹಿರಿಯರ ಪ್ರೋತ್ಸಾಹವೇ ಪ್ರಮುಖ ಕಾರಣ. ಪಿಯುಸಿ ಓದುತ್ತಿದ್ದ ಸಮಯದಲ್ಲೇ ಪ್ರತಿದಿನ ಸುಮಾರು 15 ಗಂಟೆಗಳ ಕಾಲ ನಿರಂತರವಾಗಿ ಓದುತ್ತಿದ್ದೆ. ಆರ್ಥಿಕ ಅಡಚಣೆಯಿಂದ UPSC ಕೋಚಿಂಗ್ ಪಡೆಯಲು ಸಾಧ್ಯವಾಗಲಿಲ್ಲ. ಆದರೂ ಹಿಂಜರಿಯದೇ ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ಓದುತ್ತಾ ಸ್ವಯಂ ಅಧ್ಯಯನದ ಮೂಲಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡೆ. ಅದೇ ಪರಿಶ್ರಮ ಇಂದು ಫಲ ನೀಡಿದೆ,” ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಆಡಳಿತಾತ್ಮಕ ಸೇವೆಗೆ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾರ್ಗದರ್ಶನ ಮತ್ತು ಸಲಹೆ ನೀಡಲು ಸಿದ್ಧನಿದ್ದೇನೆ ಎಂದು ಮನೋಜ್ ತಿಳಿಸಿ ಯುವಕರಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಗೌರವ ಕಾರ್ಯದರ್ಶಿ ಲೋಹಿತ್ ಕೌಡಳ್ಳಿ, “ಸಣ್ಣ ಬೆಳೆಗಾರನ ಮಗನಾಗಿ ಹುಟ್ಟಿ ಇಂತಹ ಮಹತ್ತರ ಸಾಧನೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ನಿಮ್ಮ ಪರಿಶ್ರಮದಿಂದ ಊರಿಗೆ, ಜಿಲ್ಲೆಗೆ ಮತ್ತು ನಿಮ್ಮ ತಂದೆ-ತಾಯಿಗೆ ಕೀರ್ತಿ ತಂದಿದ್ದೀರಿ. ಮುಂದಿನ ದಿನಗಳಲ್ಲಿ ಆಡಳಿತಾಧಿಕಾರಿಯಾಗಿ ಬಡವರ ಪರ ಕೆಲಸ ಮಾಡಿ ಸಮಾಜಕ್ಕೆ ಮಾದರಿಯಾಗಬೇಕು,” ಎಂದು ಸಲಹೆ ನೀಡಿದರು.

Edited By : Somashekar
PublicNext

PublicNext

11/03/2026 12:10 pm

Cinque Terre

12.01 K

Cinque Terre

0

ಸಂಬಂಧಿತ ಸುದ್ದಿ