ಹಾಸನ : ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದ 2009ರ ತ್ರಿನೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ಪುಟ್ಟರಾಜ್ ಅಲಿಯಾಸ್ ಪುಟ್ಟಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ರಾಜ್ಯ ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ. ಅಷ್ಟೇ ಅಲ್ಲದೆ, ಮಾರ್ಚ್ 31ರೊಳಗೆ ನ್ಯಾಯಾಲಯಕ್ಕೆ ಶರಣಾಗುವಂತೆ ಆರೋಪಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಕಳೆದ 2009ರ ಡಿಸೆಂಬರ್ 09ರಂದು ಹೊಳೆನರಸೀಪುರದ ದೊಡ್ಡ ಬೀದಿಯ ಸಮೀಪ ತ್ರಿನೇಶ್ ಎಂಬುವವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ತ್ರಿನೇಶ್ ಅವರು ಚಿಕಿತ್ಸೆ ಫಲಕಾರಿಯಾಗದೆ ಆಗ ಡಿಸೆಂಬರ್ 11ರಂದು ಸಾವನ್ನಪ್ಪಿದ್ದರು. ಈ ಘೋರ ಹತ್ಯೆ ಜಿಲ್ಲೆಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ್ದ ಹಾಸನ ಜಿಲ್ಲಾ ನ್ಯಾಯಾಲಯವು ಪುಟ್ಟರಾಜ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಜಿಲ್ಲಾ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಪುಟ್ಟರಾಜ್ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ನಡುವೆ ಕೆಲ ಕಾಲ ಜೈಲಿನಲ್ಲಿದ್ದ ಅವರು ಜಾಮೀನು ಪಡೆದು ಹೊರಬಂದಿದ್ದರು.
ಮೈಸೂರಿನಲ್ಲಿ ಪತ್ರಕರ್ತರಾಗಿರುವ ತ್ರಿನೇಶ್ ಅವರ ಸಹೋದರ, ತನ್ನ ತಮ್ಮನ ಸಾವಿಗೆ ನ್ಯಾಯ ಸಿಗಲೇಬೇಕೆಂದು ಪಣತೊಟ್ಟು ನಿರಂತರವಾಗಿ ಕಾನೂನು ಹೋರಾಟ ನಡೆಸುತ್ತಾ ಬಂದಿದ್ದರು. ಅವರ ಈ ಸುದೀರ್ಘ ಹೋರಾಟಕ್ಕೆ ಈಗ ಜಯ ಸಿಕ್ಕಂತಾಗಿದೆ.
PublicNext
21/03/2026 08:09 pm
LOADING...