ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಕಲೇಶಪುರ: ಭ್ರಷ್ಟಾಚಾರ ಆರೋಪ: ಬಾಗೆ ಗ್ರಾಮ ಪಂಚಾಯಿತಿ ಪಿಡಿಓ ಅಮಾನತ್ತಿಗೆ ಆಗ್ರಹ, ಕ್ರಮವಿಲ್ಲದಿದ್ದರೆ ಧರಣಿ ಎಚ್ಚರಿಕೆ

ಸಕಲೇಶಪುರ: ತಾಲ್ಲೂಕಿನ ಬಾಗೆ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಚಿನ್ನಸ್ವಾಮಿ ಅವರ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆ, ಅವರನ್ನು ತಕ್ಷಣ ಅಮಾನತ್ತುಗೊಳಿಸಿ ಪಾರದರ್ಶಕ ತನಿಖೆ ನಡೆಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.

ವೇದಿಕೆಯ ಪದಾಧಿಕಾರಿಗಳು ಈ ಕುರಿತು ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, 15ನೇ ಹಣಕಾಸು ಆಯೋಗದ ಅನುದಾನ, ವರ್ಗ–1 ಹಾಗೂ ವರ್ಗ–2 ಖಾತೆಗಳ ನಿಧಿ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಪರಿಹಾರಧನದ ದುರ್ಬಳಕೆ ನಡೆದಿರುವ ಬಗ್ಗೆ ಗಂಭೀರ ಆರೋಪಗಳಿವೆ.

ಈ ಬಗ್ಗೆ ಈಗಾಗಲೇ 04-10-2025ರಂದು ನಿಯಮ 11(5)(ಸಿ) ಅನ್ವಯ ಇಲಾಖಾ ವಿಚಾರಣೆ ನಡೆಸುವಂತೆ ಆದೇಶ ನೀಡಲಾಗಿದ್ದರೂ, ಇಂದಿಗೂ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಒಂದು ವರ್ಷಕ್ಕೂ ಮುನ್ನವೇ ಮಾಧ್ಯಮಗಳಲ್ಲಿ ವರದಿಯಾಗಿದ್ದರೂ, ತನಿಖೆ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ನಾಲ್ಕು ತಿಂಗಳ ಹಿಂದೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಸೂಚನೆ ನೀಡಿದ್ದರೂ, ಅದಕ್ಕೂ ಸ್ಪಷ್ಟ ಫಲಿತಾಂಶ ಕಾಣದಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ ಎಂದು ವೇದಿಕೆ ಆರೋಪಿಸಿದೆ.

ಈ ಕುರಿತು ಮಾತನಾಡಿದ ಸಕಲೇಶಪುರ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಗಗನ್ ಹಾಡ್ಲಹಳ್ಳಿ, “ಸಾರ್ವಜನಿಕ ಹಣದ ದುರ್ಬಳಕೆ ಕುರಿತ ಗಂಭೀರ ಆರೋಪಗಳಿರುವ ಸಂದರ್ಭದಲ್ಲಿ ಸಂಬಂಧಿತ ಅಧಿಕಾರಿಯನ್ನು ತಕ್ಷಣ ಅಮಾನತ್ತು ಮಾಡಿ ನ್ಯಾಯಸಮ್ಮತ ತನಿಖೆ ನಡೆಸಬೇಕು. ಇಲ್ಲವಾದರೆ ತಾಲ್ಲೂಕು ಪಂಚಾಯಿತಿ ಕಚೇರಿ ಮುಂಭಾಗ ಅನಿರ್ಧಿಷ್ಟಾವಧಿ ಧರಣಿ ನಡೆಸಲು ನಾವು ಸಿದ್ಧರಾಗಿದ್ದೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಹಾಸನ ಜಿಲ್ಲಾ ಕರವೇ ಪ್ರಧಾನ ಕಾರ್ಯದರ್ಶಿ ರಘು ಪಾಳ್ಯ ಅವರು ಮಾತನಾಡಿ, ಸಾರ್ವಜನಿಕ ಹಿತದೃಷ್ಟಿಯಿಂದ ಅಧಿಕಾರಿಗಳು ತ್ವರಿತ ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಕಲೇಶಪುರ ಕರ್ನಾಟಕ ರಕ್ಷಣಾ ವೇದಿಕೆ ಘಟಕದ ಅಧ್ಯಕ್ಷ ಸುನಿಲ್, ಪ್ರಧಾನ ಕಾರ್ಯದರ್ಶಿ ಜೈಕುಮಾರ್, ರೈತ ಘಟಕದ ಅಧ್ಯಕ್ಷ ವಸಂತ್ ಬೊಮ್ಮನಕೆರೆ, ನಗರ ಘಟಕದ ಅಧ್ಯಕ್ಷ ಸಿದ್ದಾರ್ಥ್ ಪಟೇಲ್ ಸೇರಿದಂತೆ ಹಲವು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Edited By :
PublicNext

PublicNext

20/03/2026 01:29 pm

Cinque Terre

14.65 K

Cinque Terre

0