ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾದಕ ಪದಾರ್ಥಗಳ ಅಪಾಯ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ : ದೇವಾಲದಕೆರೆ ಶಾಲೆಯಲ್ಲಿ ಅರಿವು ಕಾರ್ಯಕ್ರಮ

ಸಕಲೇಶಪುರ:ತಾಲೂಕಿನ ದೇವಾಲದಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಮಾದಕ ಪದಾರ್ಥಗಳ ಅಪಾಯ ಹಾಗೂ ಕಾನೂನು ಅರಿವು ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳು ತಪ್ಪು ದಾರಿಯಲ್ಲಿ ಸಾಗದೆ ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು

ಸಭೆಯಲ್ಲಿ ಭಾಗವಹಿಸಿದ ಸಾಮಾಜಿಕ ಹೋರಾಟಗಾರ ಅವರೇಕಾಡು ಪೃಥ್ವಿ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಮಾತನಾಡಿದರು. ಇಂದಿನ ಕಾಲದಲ್ಲಿ ಪ್ರೌಢಶಾಲೆಯಿಂದ ಪದವಿ ಶಿಕ್ಷಣದ ಹಂತಕ್ಕೆ ಹೋಗುವ ವೇಳೆ ಕೆಲವರು ಪ್ರೀತಿ–ಪ್ರೇಮ, ದುಷ್ಪ್ರೇರಣೆಗಳು ಹಾಗೂ ಮಾದಕ ಪದಾರ್ಥಗಳ ಚಟಕ್ಕೆ ಒಳಗಾಗಿ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿರುವುದು ದುಃಖಕರ ಸಂಗತಿ ಎಂದು ಅವರು ತಿಳಿಸಿದರು.

ವಿದ್ಯಾರ್ಥಿಗಳು ಶಿಕ್ಷಣವೇ ತಮ್ಮ ಪ್ರಮುಖ ಗುರಿ ಎಂಬುದನ್ನು ಮನಗಂಡು, ಕಾಲೇಜುಗಳು ಜ್ಞಾನಾರ್ಜನೆಗೆ ಇರುವ ಪವಿತ್ರ ಕೇಂದ್ರಗಳೆಂಬ ಅರಿವಿನಿಂದ ಓದಿನತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಬೀಡಿ, ಸಿಗರೇಟ್‌ನಂತಹ ಚಟಗಳಿಂದ ಆರಂಭವಾಗಿ ಮದ್ಯಪಾನ ಮತ್ತು ಗಾಂಜಾ ಸೇರಿದಂತೆ ಮಾದಕ ಪದಾರ್ಥಗಳತ್ತ ಯುವಕರು ಆಕರ್ಷಿತರಾಗುತ್ತಿರುವುದು ಸಮಾಜಕ್ಕೆ ಅಪಾಯಕಾರಿ ಬೆಳವಣಿಗೆ ಎಂದು ಎಚ್ಚರಿಸಿದರು.

ಇದೇ ವೇಳೆ ಮೊಬೈಲ್ ಬಳಕೆಯನ್ನು ದುರುಪಯೋಗಪಡಿಸಿಕೊಳ್ಳಬಾರದು, ಚಾಲನಾ ಪರವಾನಗಿ ಇಲ್ಲದೆ ಬೈಕ್ ಅಥವಾ ಕಾರು ಚಾಲನೆ ಮಾಡಬಾರದು, ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಬೇಕು ಎಂಬುದರ ಜೊತೆಗೆ ರಸ್ತೆ ಸುರಕ್ಷತೆ ಬಗ್ಗೆ ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿದರು. ಪಾದಚಾರಿಗಳು ರಸ್ತೆ ಮೇಲೆ ನಡೆಯುವಾಗ ಬಲಭಾಗದಲ್ಲಿ ನಡೆಯುವುದರಿಂದ ಎದುರಿನಿಂದ ಬರುವ ವಾಹನಗಳನ್ನು ಗಮನಿಸಿ ಅಪಘಾತಗಳನ್ನು ತಪ್ಪಿಸಿಕೊಳ್ಳಬಹುದು ಎಂಬ ಮಾಹಿತಿಯನ್ನೂ ಹಂಚಿಕೊಂಡರು.

ಈ ಸಂದರ್ಭದಲ್ಲಿ ರಾಷ್ಟ್ರಸೇವಿಕ ಸಮಿತಿ ಸಕಲೇಶಪುರ ತಾಲೂಕು ಸಂಪರ್ಕ ಪ್ರಮುಖ್ ಮೇಘನಾ ನವೀನ್,ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸೀನ ಹಾಗೂ ಸಾಮಾಜಿಕ ಚಿಂತಕರಾದ ಸುರೇಶ್ , ದೇವಾಲದಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಮ್ಮ, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಲ್ಲಿ ಉತ್ತಮ ಜೀವನ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ನಡೆದ ಈ ಕಾರ್ಯಕ್ರಮ ಎಲ್ಲರಿಂದ ಮೆಚ್ಚುಗೆ ಪಡೆದಿತು.

Edited By :
Kshetra Samachara

Kshetra Samachara

12/03/2026 11:27 am

Cinque Terre

1.5 K

Cinque Terre

0

ಸಂಬಂಧಿತ ಸುದ್ದಿ