ಚಿತ್ರದುರ್ಗ: ಶಾಲಾ ಆವರಣದಲ್ಲಿ ಆಟವಾಡುತ್ತಿದ್ದಾಗ ನಾಗರಹಾವು ಕಚ್ಚಿ ಅಸ್ವಸ್ಥಗೊಂಡಿದ್ದ ಒಂದನೇ ತರಗತಿ ವಿದ್ಯಾರ್ಥಿನಿಯ ಪ್ರಾಣವನ್ನು, ಶಿಕ್ಷಕರೊಬ್ಬರು ತಮ್ಮ ಪ್ರಾಣದ ಹಂಗು ತೊರೆದು ಕಾಪಾಡಿದ ಮಾನವೀಯ ಘಟನೆ ಜಿಲ್ಲೆಯ ಹುಣಸೆಕಟ್ಟೆಯಲ್ಲಿ ನಡೆದಿದೆ.
ಶನಿವಾರ ಬೆಳಿಗ್ಗೆ ಚಿತ್ರದುರ್ಗ ತಾಲ್ಲೂಕಿನ ಹುಣಸೆಕಟ್ಟೆ ಸರ್ಕಾರಿ ಶಾಲೆಗೆ ಎಂದಿನಂತೆ ವಿದ್ಯಾರ್ಥಿನಿ ಸೃಷ್ಟಿ ಬಂದಿದ್ದಳು. ಆವರಣದಲ್ಲಿ ಆಟವಾಡುತ್ತಿದ್ದ ವೇಳೆ ಆಕೆಗೆ ದೊಡ್ಡ ನಾಗರಹಾವು ಕಚ್ಚಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಶಿಕ್ಷಕ ರವಿಶಂಕರ್, ಸಮಯಪ್ರಜ್ಞೆ ಮೆರೆದಿದ್ದಾರೆ. ಕೂಡಲೇ ಬಾಲಕಿಯ ಕಾಲಿನ ಭಾಗದಿಂದ ವಿಷ ಹರಡದಂತೆ ಬಾಯಿಯಿಂದ ವಿಷವನ್ನು ಹೀರಿ ಹೊರಹಾಕಿದ್ದಾರೆ.
ಹಾವಿನ ವಿಷದ ಅಂಶ ದೇಹ ಸೇರಿದ ಪರಿಣಾಮ ಬಾಲಕಿ ಸೃಷ್ಟಿ ಹಾಗೂ ಶಿಕ್ಷಕ ರವಿಶಂಕರ್ ಇಬ್ಬರೂ ಅಸ್ವಸ್ಥಗೊಂಡಿದ್ದರು. ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಬಾಲಕಿ ಸೃಷ್ಟಿ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಶಿಕ್ಷಕ ರವಿಶಂಕರ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಡಿಡಿಪಿಐ ಮಂಜುನಾಥ್ ಮಾಹಿತಿ ನೀಡಿದ್ದಾರೆ.
ತನ್ನ ಪ್ರಾಣವನ್ನೂ ಲೆಕ್ಕಿಸದೆ ವಿದ್ಯಾರ್ಥಿನಿಯನ್ನು ಕಾಪಾಡಿದ ಶಿಕ್ಷಕ ರವಿಶಂಕರ್ ಅವರ ಸಾಹಸಕ್ಕೆ ಈಗ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
PublicNext
14/03/2026 09:53 pm
LOADING...