ಮೈಸೂರು: ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳಿಗಾಗಿ ಸಾರ್ವಜನಿಕರನ್ನು ಅಲೆದಾಡಿಸುವ ಅಧಿಕಾರಿಗಳ ಧೋರಣೆಯನ್ನು ಖಂಡಿಸಿ, ರೈತರೊಬ್ಬರು ವಿನೂತನವಾಗಿ ಪ್ರತಿಭಟಿಸಿರುವ ಘಟನೆ ಮೈಸೂರು ಜಿಲ್ಲೆಯ ಕೆ.ಆರ್. ನಗರದಲ್ಲಿ ನಡೆದಿದೆ.
ಕೆ.ಆರ್. ನಗರ ತಾಲ್ಲೂಕಿನ ಅರ್ಜುನಳ್ಳಿ ಗ್ರಾಮದ ರೈತ ರಾಮ್ ಪ್ರಸಾದ್ ಎಂಬುವವರು ತಾಲ್ಲೂಕು ಕಚೇರಿಯ ಮುಂಭಾಗದಲ್ಲಿಯೇ ಚಾಪೆ, ದಿಂಬು ಹಾಸಿ, ರಗ್ಗು ಹೊದ್ದುಕೊಂಡು 'ನಿದ್ರೆ' ಮಾಡುವ ಮೂಲಕ ಆಡಳಿತ ವೈಖರಿಯ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ತಾಲ್ಲೂಕು ಆಡಳಿತವು ರೈತರ ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಅಧಿಕಾರಿಗಳು ಕುಂಭಕರ್ಣ ನಿದ್ರೆಯಲ್ಲಿದ್ದಾರೆ ಎಂಬುದು ಪ್ರತಿಭಟನೆ ನಿರತ ರೈತನ ಪ್ರಮುಖ ಆರೋಪ.
ತಮ್ಮ ಕೆಲಸಗಳಿಗಾಗಿ ರೈತರು ಹತ್ತಾರು ಬಾರಿ ಕಚೇರಿಗೆ ಅಲೆದರೂ, ಅಧಿಕಾರಿಗಳು ಕಷ್ಟಗಳನ್ನು ಕೇಳುತ್ತಿಲ್ಲ ಮತ್ತು ಕೆಲಸ ಮಾಡಿಕೊಡಲು ಹಿಂದೇಟು ಹಾಕುತ್ತಿದ್ದಾರೆ.
ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡದೆ ವಿನಾಕಾರಣ ಅಲೆದಾಡಿಸುತ್ತಿರುವ ತಾಲ್ಲೂಕು ಆಡಳಿತದ ಕಾರ್ಯವೈಖರಿಗೆ ರೈತ ರಾಮ್ ಪ್ರಸಾದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಅಧಿಕಾರಿಗಳೇ ನಿದ್ರೆ ಮಾಡುತ್ತಿರುವಾಗ, ನಾವೂ ನಿದ್ರೆ ಮಾಡುವ ಮೂಲಕವೇ ಅವರಿಗೆ ಎಚ್ಚರಿಕೆ ನೀಡಬೇಕು" ಎಂಬ ಉದ್ದೇಶದಿಂದ ಈ ವಿನೂತನ ಪ್ರತಿಭಟನೆ ನಡೆಸಲಾಗಿದೆ. ಈ ಘಟನೆಯು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
PublicNext
16/03/2026 03:37 pm
LOADING...