ಚಿತ್ರದುರ್ಗ: ಜಿಲ್ಲೆಯಲ್ಲಿ ಗೃಹಬಳಕೆ ಎಲ್.ಪಿ.ಜಿ. ಸಿಲಿಂಡರ್‌ಗಳ ಕೊರತೆಯ ಕುರಿತು ಹಬ್ಬಿರುವ ಆತಂಕವನ್ನು ನಿವಾರಿಸಲು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸ್ಪಷ್ಟನೆ ನೀಡಿದ್ದಾರೆ. ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಹಾರ ಇಲಾಖೆ ಹಾಗೂ ಎಲ್.ಪಿ.ಜಿ. ಸರಬರಾಜುದಾರರೊಂದಿಗೆ ನಡೆದ ಸಭೆಯ ಬಳಿಕ ಮಾತನಾಡಿದ ಅವರು, "ಜಿಲ್ಲೆಯಲ್ಲಿ ಗೃಹಬಳಕೆ ಎಲ್.ಪಿ.ಜಿ. ಸಿಲಿಂಡರ್‌ಗಳ ಕೊರತೆಯಿಲ್ಲ. ಸಾರ್ವಜನಿಕರು ಆತಂಕಕ್ಕೆ ಒಳಗಾಗಿ ಅನಗತ್ಯ ಬುಕ್ಕಿಂಗ್ ಮಾಡುವ ಮೂಲಕ ಕೃತಕ ಅಭಾವ ಸೃಷ್ಟಿಸಬಾರದು" ಎಂದು ಮನವಿ ಮಾಡಿದ್ದಾರೆ. ನಿಯಮಾನುಸಾರ ಆನ್‌ಲೈನ್‌ನಲ್ಲಿ ಸಿಲಿಂಡರ್ ಬುಕ್ಕಿಂಗ್ ಮಾಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿನ ಯುದ್ಧದ ಪರಿಣಾಮವಾಗಿ ಉದ್ಭವಿಸಿರುವ ಎಲ್.ಪಿ.ಜಿ. ಸರಬರಾಜು ವ್ಯತ್ಯಯವನ್ನು ನಿವಾರಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು 4,14,512 ಗ್ರಾಹಕರಿದ್ದು, (ಐಒಸಿ- 1,02,358, ಬಿಪಿಸಿ- 2,69,789, ಹೆಚ್‌ಪಿಸಿ- 42,365). ಜಿಲ್ಲೆಗೆ ಅಗತ್ಯವಿರುವಷ್ಟು ದಾಸ್ತಾನು ಲಭ್ಯವಿದೆ ಎಂದು ತೈಲ ಕಂಪನಿಗಳ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಗ್ರಾಹಕರು ಒಂದು ಸಿಲಿಂಡರ್ ಡೆಲಿವರಿ ಪಡೆದ ನಂತರ ಮತ್ತೊಂದು ಸಿಲಿಂಡರ್ ಬುಕ್ಕಿಂಗ್ ಮಾಡಲು ಕಾಲಾವಧಿ ನಿಗದಿಪಡಿಸಲಾಗಿದೆ. ನಗರ ಪ್ರದೇಶದಲ್ಲಿ 25 ದಿನಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿ 45 ದಿನಗಳ ಬಳಿಕ ಬುಕ್ಕಿಂಗ್ ಮಾಡಬಹುದು. ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಿಸ್ಡ್ ಕಾಲ್, ಕಂಪನಿ ಆ್ಯಪ್‌ಗಳು, ವಾಟ್ಸಾಪ್ ಅಥವಾ ಐವಿಆರ್‍ಎಸ್ ಮೂಲಕ ಮಾತ್ರ ಬುಕ್ಕಿಂಗ್ ಮಾಡಬೇಕು. ಆನ್‌ಲೈನ್ ಬುಕ್ಕಿಂಗ್ ಆಗದ ಹೊರತು ನೇರವಾಗಿ ಏಜೆನ್ಸಿಗಳು ಸಿಲಿಂಡರ್ ನೀಡುವುದಿಲ್ಲ. ಆದ್ದರಿಂದ, ವಿನಾಕಾರಣ ಸಾರ್ವಜನಿಕರು ಏಜೆನ್ಸಿಗಳ ಮುಂದೆ ಕ್ಯೂ ನಿಲ್ಲಬಾರದು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಕೋರಿದ್ದಾರೆ.
ಗೃಹಬಳಕೆ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು ಅಥವಾ ಅನಧಿಕೃತವಾಗಿ ರೀಫಿಲ್ಲಿಂಗ್ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಅಂತಹ ಪ್ರಕರಣಗಳು ಕಂಡುಬಂದಲ್ಲಿ 'ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ ಆರ್ಡರ್ 2000' ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಎಚ್ಚರಿಕೆ ನೀಡಿದ್ದಾರೆ.
ಎಲ್.ಪಿ.ಜಿ. ಸರಬರಾಜಿನಲ್ಲಿ ಯಾವುದೇ ಸಮಸ್ಯೆ ಕಂಡುಬಂದಲ್ಲಿ ಸಾರ್ವಜನಿಕರು ಈ ಕೆಳಕಂಡ ಆಹಾರ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು:
ಚಿತ್ರದುರ್ಗ ತಾಲ್ಲೂಕು: ರಚನಾ ಎಂ. (9591381329), ಶಬಾನಾ
ಪರ್ವೀನ್ (8792244006), ನಿರಂಜನ್ (9164488263),
ತಿಪ್ಪೇಸ್ವಾಮಿ (8618966123).
ಹೊಸದುರ್ಗ ತಾಲ್ಲೂಕು: ಗಂಗಾಧರ್ (7760084045), ಲಿಂಗರಾಜ್
(8904806637), ಉಮಾದೇವಿ (8722544472)
ಹಿರಿಯೂರು ತಾಲ್ಲೂಕು:ನಾಗೇಂದ್ರ.ಜಿ (7411462337)
ಚಳ್ಳಕೆರೆ ತಾಲ್ಲೂಕು: ಶ್ರೀನಿವಾಸ್ (9448566953), ಗಿರೀಧರ್ (9880186797)
ಮೊಳಕಾಲ್ಮೂರು ತಾಲ್ಲೂಕು: ಗೀತಾಂಜನೇಯ (9880649688)
ಜಿಲ್ಲಾ ಮಟ್ಟದ ಮಾಹಿತಿ: ಜಂಟಿ ನಿರ್ದೇಶಕರು, ದೂರವಾಣಿ ಸಂಖ್ಯೆ: 08194-222408
ಸಭೆಯಲ್ಲಿ ಆಹಾರ ಇಲಾಖೆ ಜಂಟಿ ನಿರ್ದೇಶಕ ಶಿದ್ರಾಮ್ ಮಾರಿಹಾಳ, ಬಿಪಿಸಿಎಲ್ ಕಂಪನಿಯ ಸುಶ್ರೀಮಾ ಬೇಹರಾ, ಹೆಚ್‌ಪಿಸಿಎಲ್ ಕಂಪನಿಯ ಮ್ಯಾನೇಜರ್‌ಗಳಾದ ಪ್ರಸೂನ್ ಮಾಲ್, ಭರತ್ ಚಂದ್ರ, ಆಹಾರ ಶಿರಸ್ತೆದಾರರು ಹಾಗೂ ಆಹಾರ ನಿರೀಕ್ಷಕರು ಉಪಸ್ಥಿತರಿದ್ದರು.
Kshetra Samachara
16/03/2026 07:32 pm