ಬೆಳಗಾವಿ: ಬೆಳಗಾವಿ ಜಿಲ್ಲಾ ದೈವಜ್ಞ ಜುವೆಲರ್ಸ್ ಅಸೋಸಿಯೇಷನ್ (DJA) ವತಿಯಿಂದ ಮಾರ್ಚ್ 24ರಂದು “ಸುವರ್ಣ ಸಮ್ಮೇಳನ”ವನ್ನು ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಮಾಣಿಕ್ ಅಣ್ವೇಕರ್ ಹಾಗೂ ಗೌರವ ಕಾರ್ಯದರ್ಶಿ ವೈಭವ ವೆರ್ಣೇಕರ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಆಲ್ ಇಂಡಿಯಾ ಜೆಮ್ ಅಂಡ್ ಜುವೆಲರಿ ಡೊಮೆಸ್ಟಿಕ್ ಕೌನ್ಸಿಲ್ (GJC) ಸಹಯೋಗದಲ್ಲಿ ನಡೆಯಲಿರುವ ಈ ಸಮ್ಮೇಳನವು ಅಂದು ಬೆಳಿಗ್ಗೆ 10 ಗಂಟೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಜರುಗಲಿದೆ. ಚಿನ್ನ-ಬೆಳ್ಳಿ ಆಭರಣ ವ್ಯಾಪಾರದಲ್ಲಿ ತಲೆಮಾರುಗಳಿಂದ ತೊಡಗಿಸಿಕೊಂಡಿರುವ ಪಾರಂಪರಿಕ ಜುವೆಲರ್ಸ್, ಚಿಲ್ಲರೆ ಮತ್ತು ಹೋಲ್‌ಸೇಲ್ ವ್ಯಾಪಾರಿಗಳು, ಚಿನ್ನದ ತಯಾರಕರು ಹಾಗೂ ನೈಪುಣ್ಯ ಹೊಂದಿದ ಕರಕುಶಲ ಕಾರ್ಮಿಕರನ್ನು ಒಗ್ಗೂಡಿಸಿ, ಆಭರಣ ಉದ್ಯಮದ ಅಸಂಘಟಿತ ವಲಯವನ್ನು ರಕ್ಷಿಸಿ ಬಲಪಡಿಸುವುದು ಈ ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ.
ಈ ಸಮ್ಮೇಳನದಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಹಾಗೂ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ 500ಕ್ಕೂ ಹೆಚ್ಚು ಜುವೆಲರ್ಸ್ ಭಾಗವಹಿಸುವ ನಿರೀಕ್ಷೆಯಿದೆ.
ಸಮ್ಮೇಳನದಲ್ಲಿ ಆಲ್ ಇಂಡಿಯಾ ಜೆಮ್ ಅಂಡ್ ಜುವೆಲರಿ ಡೊಮೆಸ್ಟಿಕ್ ಕೌನ್ಸಿಲ್ (GJC) ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ಬೆಂಗಳೂರು ಜುವೆಲರ್ಸ್ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಕರ್ನಾಟಕ ಜುವೆಲರ್ಸ್ ಫೆಡರೇಷನ್ ಅಧ್ಯಕ್ಷರು ಭಾಗವಹಿಸಿ, ಆಭರಣ ಉದ್ಯಮದ ಇಂದಿನ ಸವಾಲುಗಳು ಮತ್ತು ಭವಿಷ್ಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.ಈ ಕಾರ್ಯಕ್ರಮಕ್ಕೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಇತರ ಸಚಿವರು, ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ನಗರದ ಶಾಸಕರು ಉಪಸ್ಥಿತರಿರುವರು.
ಈ ಸಮ್ಮೇಳನದ ಮೂಲಕ ಆಭರಣ ಉದ್ಯಮದ ಎಲ್ಲ ವರ್ಗದವರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಪಾರಂಪರಿಕ ಜುವೆಲರ್ಸ್ ಮತ್ತು ತಯಾರಕರ ಸಮಸ್ಯೆಗಳನ್ನು ಚರ್ಚಿಸಿ, ಈ ಪಾರಂಪರಿಕ ಉದ್ಯಮವನ್ನು ರಕ್ಷಿಸಿ ಬಲಪಡಿಸಲು ಸರ್ಕಾರದ ಸಹಕಾರ ಹಾಗೂ ನೀತಿ ಬೆಂಬಲವನ್ನು ಪಡೆಯುವುದು ಆಯೋಜಕರ ಉದ್ದೇಶವಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಶಾಂತ್ ರೇವಣ್ಕರ್, ನಾಗರಾಜ್ ವೆರ್ಣೇಕರ್, ಸಂಜಯ್ ಅಣ್ವೇಕರ್, ವಿನಾಯಕ ವೆರ್ಣೇಕರ್, ಶುಭಂ ಅಣ್ವೇಕರ್, ಶಂಕರ್ ಪೌಸ್ಕರ್, ಅಂಜನಾ ರೈಕರ್, ಕಲ್ಪನಾ ಮಿಸ್ಲಂಕರ್ ಮೊದಲಾದವರು ಉಪಸ್ಥಿತರಿದ್ದರು.
PublicNext
17/03/2026 04:35 pm