ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: ವಿದ್ಯಾರ್ಥಿಗಳ ಭವಿಷ್ಯಕ್ಕೆ 'ಜೈನ' ಆಸರೆ - ಬೆಂಗಳೂರಿನಲ್ಲಿ ಮತ್ತೊಂದು ಹಾಸ್ಟೆಲ್ ನಿರ್ಮಾಣಕ್ಕೆ ನಿರ್ಧಾರ!

ಅಥಣಿ: ಬೆಂಗಳೂರಿನಲ್ಲಿ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗಾಗಿ ಮತ್ತೊಂದು ಹಾಸ್ಟೆಲ್ ತೆರೆಯಲು ಕರ್ನಾಟಕ ಜೈನ ಅಸೋಸಿಯೇಷನ್ ಸರ್ವಾನುಮತದಿಂದ ನಿರ್ಣಯ ಕೈಗೊಂಡಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಜಿತೇಂದ್ರಕುಮಾರ್ ಎಸ್. ತಿಳಿಸಿದ್ದಾರೆ.

ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ನಡೆದ ಕರ್ನಾಟಕ ಜೈನ ಅಸೋಸಿಯೇಷನ್ ಬೆಂಗಳೂರು ಸದಸ್ಯರ ವಿಶೇಷ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಹಾಸ್ಟೆಲ್ ಅವಶ್ಯಕತೆ ಮತ್ತು ಧನಸಂಗ್ರಹ

ಸಭೆಯಲ್ಲಿ ಮಾತನಾಡಿದ ಜಿತೇಂದ್ರಕುಮಾರ್ ಎಸ್., "ಬೆಂಗಳೂರಿನಲ್ಲಿ ಪ್ರಸ್ತುತ ಮೂರು ವಿಭಾಗಗಳಲ್ಲಿ ಮೂರು ಹಾಸ್ಟೆಲ್‌ಗಳಿದ್ದು, 260 ವಿದ್ಯಾರ್ಥಿಗಳು ವಾಸಿಸುತ್ತಿದ್ದಾರೆ. ಹೆಚ್ಚುವರಿ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ಮತ್ತೊಂದು ಹಾಸ್ಟೆಲ್‌ನ ಅವಶ್ಯಕತೆ ಇದೆ" ಎಂದರು. ಹೊಸ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ವೆಚ್ಚವಾಗಲಿದ್ದು, ಅಸೋಸಿಯೇಷನ್‌ನ ಬಳಿಯಿರುವ ಹಣ ಹೊರತುಪಡಿಸಿ, ಸುಮಾರು ಎರಡು ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಹಣದ ಅವಶ್ಯಕತೆಯಿದೆ. ಈ ಮೊತ್ತವನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲದ ರೂಪದಲ್ಲಿ ಪಡೆಯಲು ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಗಿದೆ. ಅಸೋಸಿಯೇಷನ್‌ನ ಸಾಮಾನ್ಯ ಸಭೆಯನ್ನು ಆಯೋಜಿಸಲು ಉಪಾಧ್ಯಕ್ಷ ಹಾಗೂ ಸಮಾಜದ ಮುಖಂಡ ಶೀತಲಗೌಡ ಪಾಟೀಲ ಅವರ ಸಹಕಾರ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.

ಜೈನ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ

ಇದೇ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಜೈನ ಅಸೋಸಿಯೇಷನ್‌ನ ಉಪಾಧ್ಯಕ್ಷ ಶೀತಲಗೌಡ ಪಾಟೀಲ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವಲ್ಲಿ ರಾಜ್ಯ ಸರ್ಕಾರ ಜೈನ ಸಮುದಾಯಕ್ಕೆ ಅನ್ಯಾಯವೆಸಗಿದೆ ಎಂದು ಆರೋಪಿಸಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಳೆದ ವರ್ಷ ಬೆಳಗಾವಿ ಜಿಲ್ಲೆಯಲ್ಲಿ ನಡೆದ ಜೈನ ಸಮಾವೇಶದಲ್ಲಿ ಜೈನ ಅಭಿವೃದ್ಧಿ ನಿಗಮ ಸ್ಥಾಪಿಸುವುದಾಗಿ ಘೋಷಿಸಿದ್ದರು. ಆದರೆ, ಅಧಿವೇಶನದಲ್ಲಿ ನಿಗಮ ಘೋಷಿಸದೆ ಸರ್ಕಾರ ಕೊಟ್ಟ ಮಾತಿಗೆ ತಪ್ಪಿ ನಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಶೀತಲಗೌಡ ಪಾಟೀಲ, ಕೂಡಲೇ ಜೈನ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರು

ಸಭೆಯಲ್ಲಿ ಕರ್ನಾಟಕ ಜೈನ ಅಸೋಸಿಯೇಷನ್ ಅಧ್ಯಕ್ಷ ಜಿತೇಂದ್ರ ಕುಮಾರ, ಉಪಾಧ್ಯಕ್ಷರಾದ ರಾಜಕೀರ್ತಿ, ಶೀತಲಗೌಡ ಪಾಟೀಲ, ಕಾರ್ಯದರ್ಶಿ ಶ್ರೀಮತಿ ಆಶಾಪ್ರಭು, ಸಹ ಕಾರ್ಯದರ್ಶಿಗಳಾದ ಶ್ರೀಮತಿ ಡಾ. ನೀರಜಾ ನಾಗೇಂದ್ರಕುಮಾರ, ಕೋಶಾಧಿಕಾರಿ ಮಹಾವೀರ, ಸಹ ಕೋಶಾಧಿಕಾರಿ ಧರಣೇಂದ್ರಯ್ಯ ಎ.ಸಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಅಶೋಕ ಜೈನ್, ಉತ್ತಮ ಪಾಟೀಲ, ಶ್ರೀಮತಿ ಕೋಮಲ ಬ್ರಹ್ಮದೇವಯ್ಯ, ಜಂಬುಕುಮಾರ ಬಾಗೇವಾಡಿ, ಜಿನೇಂದ್ರಕುಮಾರ, ದೀಪಕ ಪಂಡಿತ, ದೀಪಕಕುಮಾರ, ದೇಶಪತ್ತೆಪ್ಪ ಖೆಮಲಾಪೂರೆ, ದೇವರಾಜ್ ಎಂ.ಎಸ್, ಶ್ರೀಮತಿ ಪದ್ಮಿನಿ ಪ್ರಶಾಂತ, ಪ್ರಕಾಶ.ಜೆ, ಪುಷ್ಪಕ ಹನುಮಣ್ಣವರ, ಬಾಹುಬಲಿ ಕಡಕೋಳ, ಬಾಹುಬಲಿ ಪರಮಗೌಡರ, ಬ್ರಹ್ಮಯ್ಯ, ರಾಜೇಶ ಪಿ.ಸಿ, ವಜ್ರಕುಮಾರ ಎಸ್.ಎ, ಸುಕುಮಾರ ಪಾಟೀಲ, ಸ್ವರೂಪ ಜೈನ್, ವಿನೋದ ದೊಡ್ಡಣ್ಣವರ, ಪ್ರವೀಣ ಕಾಸಾರ ಹಾಗೂ ಮುಖಂಡರಾದ ಅರುಣಕುಮಾರ ಯಲಗಾದ್ರಿ, ಎ.ಸಿ. ಪಾಟೀಲ, ರಾಜು ನಾಡಗೌಡರ, ಧೂಳಗೌಡ ಪಾಟೀಲ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Edited By :
PublicNext

PublicNext

19/03/2026 05:31 pm

Cinque Terre

14 K

Cinque Terre

0