ಸುರತ್ಕಲ್: ಖಂಡಿಗೆ ಹಾಗೂ ನಂದಿನಿ ನದಿಗಳ ಮಾಲಿನ್ಯಕ್ಕೆ ಪರೋಕ್ಷ ಕಾರಣರಾಗಿರುವ ಆರೋಪದ ಮೇಲೆ ಒಂಬತ್ತು ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕರ್ನಾಟಕ ಲೋಕಾಯುಕ್ತ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಲೋಕಾಯುಕ್ತ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸುವುದರೊಂದಿಗೆ ಸ್ವಚ್ಛತಾ ಪ್ರಗತಿಯ ಕುರಿತು ಮಾಹಿತಿ ಕಲೆಹಾಕಿದೆ. ಸುರತ್ಕಲ್‌ನ ಖಂಡಿಗೆ ಹಾಗೂ ನಂದಿನಿ ನದಿ ಮಾಲಿನ್ಯಕ್ಕೆ ಪರೋಕ್ಷ ಕಾರಣರಾಗಿರುವ ಆರೋಪದ ಮೇಲೆ ಒಂಬತ್ತು ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕರ್ನಾಟಕ ಲೋಕಾಯುಕ್ತ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ವಿಚಾರಣೆ ತೀವ್ರಗೊಳಿಸಿದೆ.
ಸ್ಥಳ ಮಹಜರು ಹಾಗೂ ಮುಂದಿನ ವಿಚಾರಣೆ
ಲೋಕಾಯುಕ್ತ ಡಿವೈಎಸ್‌ಪಿ ಗಾನಾ ಕುಮಾರಿ ನೇತೃತ್ವದ ತಂಡವು ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ, ಪರಿಶೀಲನೆ ನಡೆಸಿತು. ಮುಂದಿನ ವಿಚಾರಣೆಯನ್ನು ಏಪ್ರಿಲ್ 21ಕ್ಕೆ ನಿಗದಿಪಡಿಸಲಾಗಿದೆ. ಮಾಲಿನ್ಯ ಕುರಿತು 2025ರ ಮಾರ್ಚ್‌ನಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ಆರಂಭಗೊಂಡಿತ್ತು. ಆ ಬಳಿಕ ಸ್ವಚ್ಛತಾ ಕಾರ್ಯದಲ್ಲಿ ಪ್ರಗತಿ ಕಂಡು, ಕಳೆ ತೆಗೆದು ಮೀನು ಹಿಡಿಯುವ ಜಾತ್ರೆಗೂ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಒಳಚರಂಡಿ ತ್ಯಾಜ್ಯ ಸೋರಿಕೆಗೆ ಇದುವರೆಗೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ.
ಸ್ವಯಂ ಪ್ರೇರಿತ ದೂರು ದಾಖಲು
ನಂದಿನಿ, ಖಂಡಿಗೆ ನದಿ ಹಾಗೂ ಉಪನದಿಗಳು ಕಲುಷಿತಗೊಂಡಿದ್ದರೂ, ಅದರ ಬಗ್ಗೆ ಕ್ರಮ ಕೈಗೊಳ್ಳದ ಆರೋಪದ ಮೇಲೆ ಕರ್ನಾಟಕ ಲೋಕಾಯುಕ್ತವು ಮಾರ್ಚ್ 24ರಂದು ಒಂಬತ್ತು ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಲಂ 7(2)ರ ಅಡಿಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು.
ದೂರಿನ ಹಿನ್ನೆಲೆ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಮಾರ್ಚ್ 7 ಮತ್ತು 8ರಂದು ಭೇಟಿ ನೀಡಿದ್ದ ವೇಳೆ, ಸುಕೇಶ್ ಶೆಟ್ಟಿ ಎಂಬುವರು ದೂರು ನೀಡಿದ್ದರು. ಈ ದೂರಿನಲ್ಲಿ, ನದಿ ಬದಿ ಹಿಂಭಾಗದ ಹೊಳೆಗಳಿಗೆ ಮಣ್ಣು ತುಂಬಿಸಿ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಅಲ್ಲದೆ, ತ್ಯಾಜ್ಯ ನೀರು ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯ ಎಸ್‌ಟಿಪಿ ಘಟಕದ ಹೊಲಸು ನೀರನ್ನು ಖಂಡಿಗೆ ಮತ್ತು ನಂದಿನಿ ನದಿಗಳಿಗೆ ನೇರವಾಗಿ ಬಿಡುತ್ತಿರುವುದರಿಂದ ಸ್ಥಳೀಯ ಜಲಮೂಲಗಳು ಕಲುಷಿತಗೊಂಡಿವೆ ಎಂದು ತಿಳಿಸಲಾಗಿತ್ತು.
Kshetra Samachara
18/03/2026 04:55 pm