ಬ್ರಹ್ಮಾವರ: ರಥೋತ್ಸವ ನೋಡಲು ಚಂದ. ಆದರೆ ರಥದ ಹಿಂದಿನ ಪರಿಶ್ರಮ ಬಾರಿ ದುಬಾರಿ ಮತ್ತು ಸವಾಲು. ಕರಾವಳಿ ಜಿಲ್ಲೆಯ ಬಹುತೇಕ ಆಗಮೋಕ್ತ ದೇವಸ್ಥಾನಗಳಲ್ಲಿ, ದೇವಸ್ಥಾನದ ವಾಸ್ತು ಶಾಸ್ತ್ರದ ಆಯ ಅಳತೆಗೆ ಅನುಗುಣವಾಗಿ ರಥಗಳು ಕೂಡ ನಿರ್ಮಾಣಗೊಂಡಿರುತ್ತವೆ. ವರ್ಷಕ್ಕೊಮ್ಮೆ ಜರುಗುವ ಈ ರಥೋತ್ಸವವು ಸನಾತನ ಧರ್ಮದ ಎಲ್ಲಾ ಜಾತಿ, ಜನಾಂಗದವರ ಶ್ರಮ ಮತ್ತು ಸೇವೆಗಳಿಗೆ ಪೂರಕವಾಗಿ ನಿಲ್ಲುತ್ತದೆ.
ಕೇವಲ ಒಂದು ದಿನದ ರಥೋತ್ಸವಕ್ಕಾಗಿ ಬ್ರಹ್ಮರಥವನ್ನು ಸಿದ್ಧಪಡಿಸಲು ಇಂದಿನ ದಿನಗಳಲ್ಲಿ ಸುಮಾರು 80 ಸಾವಿರ ರೂಪಾಯಿ ನಿರ್ವಹಣಾ ವೆಚ್ಚ ತಗಲುತ್ತದೆ. ಇದರ ಜೊತೆಗೆ, ರಥಗಳನ್ನು ಸುಂದರವಾಗಿ ಅಲಂಕರಿಸಲು ಮರ, ಅಡಕೆ, ಬಿದಿರು, ಬೆತ್ತ, ಹುರಿಹಗ್ಗ, ಬಟ್ಟೆಯ ಪತಾಕೆಗಳಂತಹ ಸಾಮಗ್ರಿಗಳು ಬೇಕಾಗುತ್ತವೆ. ಹಲವಾರು ಮಂದಿ ಹಲವು ದಿನಗಳ ಕಾಲ ಹಗಲು ಇರುಳು ಶ್ರಮ ಶಕ್ತಿಯನ್ನು ಸೇವೆಯಾಗಿ ನೀಡಿದರೂ, ಪ್ರತಿ ವರ್ಷ ಉತ್ಸವಗಳಿಗೆ ಒಟ್ಟಾರೆ 10 ಲಕ್ಷ ರೂಪಾಯಿಗಳಷ್ಟು ಹಣ ಬೇಕಾಗುತ್ತದೆ. ಇದರಲ್ಲಿ ತುಂಡಾಗಿ ಬೀಳುವ ಪತಾಕೆಗಳು, ಹಾಳಾಗುವ ಅಡಕೆ ಪಟ್ಟಿಗಳು, ಹಗ್ಗಗಳು ಮತ್ತು ಬಿದಿರಿನ ಕಡ್ಡಿಗಳಂತಹ ವಸ್ತುಗಳನ್ನು ಪ್ರತಿ ವರ್ಷ ಹೊಸದಾಗಿ ಮಾಡಬೇಕಾಗುತ್ತದೆ.
ಉತ್ತಮ ಆದಾಯವಿರುವ ಅನೇಕ ದೇವಸ್ಥಾನಗಳಿಗೆ ಇದು ಹೊರೆಯಾಗಿ ಕಾಣಿಸದಿದ್ದರೂ, ಮಧ್ಯಮ ವರ್ಗದ ದೇವಸ್ಥಾನಗಳಿಗೆ ಇದು ನಿಜಕ್ಕೂ ಕಷ್ಟಕರವಾದ ಸವಾಲು. ಪ್ರತಿ ಹೊಸ ವರ್ಷ ಯುಗಾದಿಯ ಬಳಿಕ ಬರುವ ಪ್ರಥಮ ರಥೋತ್ಸವವಾಗಿ ತುಳುನಾಡ ಸೀಮೆಯ ಅಧಿದೇವರು ಎನಿಸಿದ ಬಾರಕೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ರಥೋತ್ಸವ ಮಾರ್ಚ್ 26 ರಂದು ಜರುಗಲಿದೆ. ಈ ರಥೋತ್ಸವಕ್ಕೆ ಸಿದ್ಧತೆಗಳು ಬಿರುಸಿನಿಂದ ಸಾಗಿದ್ದು, ಹತ್ತಾರು ಮಂದಿ ರಥ ಕಟ್ಟುವ ವೃತ್ತಿಪರ ನಿಪುಣರು ಮತ್ತು ಸ್ವಯಂಸೇವಕರು ರಥದ ಅಲಂಕಾರಿಕ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಆದಾಯ ಕಡಿಮೆ ಇರುವ ದೇವಸ್ಥಾನಗಳ ರಥೋತ್ಸವಕ್ಕೆ ಲಕ್ಷಾಂತರ ರೂಪಾಯಿ ಹಣ ಬೇಕಾಗುತ್ತದೆ ಎಂಬುದು ಇಲ್ಲಿ ಗಮನಾರ್ಹ.
PublicNext
21/03/2026 06:56 pm