ಸುರತ್ಕಲ್: ಚೇಳಾಯರು ಖಂಡಿಗೆ ಬಳಿ ನಂದಿನಿ ನದಿಗೆ ಮಂಗಳೂರಿನ ಆಸ್ಪತ್ರೆಗಳ ತ್ಯಾಜ್ಯ ನೀರು ಹರಿದು ಮಲಿನಗೊಂಡಿದ್ದು ಈ ಬಗ್ಗೆ ನಗರ ಪಾಲಿಕೆ ಇಲಾಖೆ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಿದರೂ ಇದುವರೆಗೂ ಯಾವುದೇ ಪ್ರಗತಿ ಕಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಉಮಾನಾಥ ಕೋಟ್ಯಾನ್ ರವರಿಗೆ ಮನವಿ ಮಾಡಿದ್ದಾರೆ.
ಮಂಗಳೂರು ನಗರ ಪಾಲಿಕೆಯ ಹಾಗೂ ಮುಕ್ಕ ಆಸ್ಪತ್ರೆಯ ಮಲ ತ್ಯಾಜ್ಯ ನೀರು ನೇರವಾಗಿ ನದಿಗೆ ಹರಿಯ ಬಿಡುತ್ತಿದ್ದು ಜೀವನದಿ ನಂದಿನಿಯೇ ನಿಸ್ತೇಜವಾಗಿದೆ. ನಂದಿನಿ ನದಿ ಕೊಳಚೆಯಾಗಿದ್ದು ಎಲ್ಲೆಂದರಲ್ಲಿ ಹಾವಸೆ ಬೆಳೆದಿದೆ
ಇದೀಗ ನಗರ ಪಾಲಿಕೆ ವತಿಯಿಂದ ಹಾವಸೆ ತೆಗೆಯುವ ಕಾರ್ಯ ನಡೆಯುತ್ತಿದೆ. ನಂದಿನಿ ನದಿ ಮಾಲಿನ್ಯದಿಂದ ಸ್ಥಳೀಯ ಬಾವಿಗಳ ನೀರು ಕೂಡ ಮಲಿನವಾಗಿದೆ. ಈ ಬಗ್ಗೆ ಚೇಳಾಯರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪುಷ್ಪರಾಜ ಶೆಟ್ಟಿ ಮಾತನಾಡಿ ಅಂದು ನಗರ ಪಾಲಿಕೆಯ ಅವೈಜ್ಞಾನಿಕ ಯುಜಿಡಿ ಕಾಮಗಾರಿಯಿಂದ ಇಂದು ಗ್ರಾಮೀಣ ಭಾಗದ ಜನತೆ ಸಂಕಷ್ಟ ಎದುರಿಸುವಂತಾಗಿದೆ.
ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದರೂ ಇದುವರೆಗೂ ಪ್ರಯೋಜನವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಮಂಗಳೂರು ನಗರ ಪಾಲಿಕೆಯ ಹಾಗೂ ಮುಕ್ಕ ಆಸ್ಪತ್ರೆಯ ತ್ಯಾಜ್ಯ ನೀರು ನಂದಿನಿ ನದಿಗೆ ಹರಿಯ ಬಿಡುತ್ತಿದ್ದು ಖಂಡಿಗೆ ಪ್ರದೇಶದಲ್ಲಿ ನೀರು ಮಲಿನವಾಗುತ್ತಿದೆ. ನದಿಯಲ್ಲಿ ಮುಳುಗಿದರೆ ಮೇಲೆ ಬರುವಾಗ ಮೈಯೆಲ್ಲಾ ಕಪ್ಪು ಕಪ್ಪಾಗಿ ರೋಗದ ಭೀತಿ ಕಾಣುತ್ತಿದೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸ್ಥಳೀಯ ಶಾಸಕನಾಗಿ ಊರಿನವರ ಜೊತೆ ಸೇರಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
PublicNext
21/03/2026 06:25 pm
LOADING...