ಉಡುಪಿ; ಜಿಲ್ಲೆಯ ಬೀಡಿನ ಗುಡ್ಡೆ ಬಯಲು ರಂಗಮಂದಿರದ ಪಕ್ಕದಲ್ಲಿರುವ ಅಂಗನವಾಡಿ ಕೇಂದ್ರದ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಕಳೆದ ಹತ್ತು–ಹನ್ನೆರಡು ವರ್ಷಗಳಿಂದ ಈ ಅಂಗನವಾಡಿ ನಗರಸಭೆಯ ಕಟ್ಟಡದಲ್ಲಿ ಬಾಡಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಇಂದಿಗೂ ಸ್ವಂತ ಕಟ್ಟಡದ ಸೌಲಭ್ಯ ದೊರಕಿಲ್ಲ. ಸಿಮೆಂಟ್ ಗೋಡೆಗಳ ಬದಲಿಗೆ ಪ್ಲೈವುಡ್ ಬಳಸಿ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಿರುವ ಸಣ್ಣ ಕೊಠಡಿಯಲ್ಲಿ ಮಕ್ಕಳಿಗೆ ದಿನನಿತ್ಯದ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.
ಸುಮಾರು 20 ಕ್ಕೂ ಹೆಚ್ಚಿನ ಮಕ್ಕಳು ಪ್ರತಿದಿನ ಇಲ್ಲಿ ಆಗಮಿಸುತ್ತಿದ್ದರೂ, ಅವರಿಗೆ ಬೇಕಾದ ಮೂಲಭೂತ ಸೌಲಭ್ಯಗಳ ಕೊರತೆ ಕಾಡುತ್ತಿದೆ. ಸರಿಯಾದ ಅಡುಗೆಮನೆ ಇಲ್ಲ, ಮಕ್ಕಳಿಗೆ ಆಟದ ಸಾಮಗ್ರಿಗಳು ಇಲ್ಲ, ಆಟವಾಡಲು ಮೈದಾನವೂ ಇಲ್ಲ. ಅಂಗನವಾಡಿಯ ಸುತ್ತಮುತ್ತ ಕಸದ ರಾಶಿ ಕಾಣಸಿಗುತ್ತಿದ್ದು, ಬೀದಿ ನಾಯಿಗಳ ಕಾಟವೂ ಹೆಚ್ಚಾಗಿದೆ. ಇಂತಹ ಅಸ್ವಚ್ಛ ಪರಿಸರದಲ್ಲಿ ಬಡ ಕುಟುಂಬಗಳ ಮಕ್ಕಳು ಶಿಕ್ಷಣ ಮತ್ತು ಪೌಷ್ಟಿಕ ಆಹಾರಕ್ಕಾಗಿ ಬರುತ್ತಿರುವುದು ಆತಂಕಕಾರಿ ವಿಷಯವಾಗಿದೆ.
ಮಕ್ಕಳ ಆರೋಗ್ಯ, ಭದ್ರತೆ ಮತ್ತು ಶಿಕ್ಷಣದ ದೃಷ್ಟಿಯಿಂದ ಈ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಇಷ್ಟೊಂದು ದಯನೀಯ ಸ್ಥಿತಿ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸದಿರುವುದು ವಿಷಾದನೀಯ. ಬೀಡಿನ ಗುಡ್ಡೆ ಪ್ರದೇಶಕ್ಕೆ ತುರ್ತಾಗಿ ಸ್ವಂತ, ಸಮರ್ಪಕ ಮತ್ತು ಸುರಕ್ಷಿತ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡುವುದು ಅನಿವಾರ್ಯವಾಗಿದೆ. ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಆಗಿರುವಂತ ಲಕ್ಷ್ಮಿ ಹೆಬ್ಬಾಳ್ಕರ್ ಕೂಡಲೇ ಇದ್ದಾಗ ಗಮನಹರಿಸಿ ಇದಕ್ಕೊಂದು ಪರಿಹಾರ ನೀಡಬೇಕಾಗಿ ಪಬ್ಲಿಕ್ ನೆಕ್ಸ್ಟ್ ನ ಕಳಕಳಿಯ ವಿನಂತಿ.
PublicNext
20/03/2026 10:08 am