ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಅಪ್ಪಟ ಕನ್ನಡಿಗರಿಗೆ ಒಲಿದ ಮೇಯರ್, ಉಪ‌ ಮೇಯರ್ ಪಟ್ಟ

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಇತಿಹಾಸದಲ್ಲೇ ಇಬ್ಬರೂ ಅಪ್ಪಟ ಕನ್ನಡಿಗರಿಗೆ ಮೇಯರ್, ಉಪ ಮೇಯರ್ ಪಟ್ಟ ದೊರೆತಿದೆ. ಜಾತಿ ಲೆಕ್ಕಾಚಾರದ ಮಧ್ಯೆಯೂ ಕನ್ನಡಿಗರಾದ ಪ್ರೀತಿ ಕಾಮಕರ ಮೇಯರ್, ಹನುಮಂತ ಕೊಂಗಾಲಿ ಉಪ ಮೇಯರ್ ಆಗಿ ಆಯ್ಕೆಯಾದ್ರು.

ಬಿಜೆಪಿ ನಾಯಕರ ಅವಿರೋಧ ಆಯ್ಕೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಚುನಾವಣೆ ನಡೆಯುವಂತೆ ನೋಡಿಕೊಂಡಿತು. ಇನ್ನೂ ಇದೇ ಮೊದಲ ಬಾರಿಗೆ ನೇಕಾರ ಸಮುದಾಯಕ್ಕೆ ಮೇಯರ್ ಗದ್ದುಗೆ ಸಿಕ್ಕಿದ್ದು ವಿಶೇಷ.

ಹೌದು, ಇಂದು ಬೆಳಗಾವಿ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಿತು. ಕಾಂಗ್ರೆಸ್ ಅಭ್ಯರ್ಥಿಗಳನ್ನ ಕಣಕ್ಕಿಳಿಸಿ ಬಿಜೆಪಿ ಅವಿರೋಧ ಕನಸಿಗೆ ತಣ್ಣೀರು ಎರಚಿತು. ಮೇಯರ್ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಪ್ರೀತಿ ಕಾಮಕರ ಮತ್ತು ಉಪ ಮೇಯರ್ ಸ್ಥಾನಕ್ಕೆ ಹನುಮಂತ ಕೊಂಗಾಲಿ ಉಮೇದುವಾರಿಕೆ ಸಲ್ಲಿಸಿದ್ರು.

ಅತ್ತ ಕಾಂಗ್ರೆಸ್ ಅಭ್ಯರ್ಥಿಯಾಗಿ ಖುರ್ಷಿದ್ ಮುಲ್ಲಾ ಮೇಯರ್ ಸ್ಥಾನಕ್ಕೆ, ಮೋದಿನ ಸಾಬ್ ಮತ್ತೇವಾಲೆ ಉಪ‌ ಮೇಯರ್ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ರು. ಹೀಗಾಗಿ ಚುನಾವಣಾಧಿಕಾರಿ ಬೆಳಗಾವಿ ಪ್ರಾದೇಶಿಕ ಆಯುಕ್ತೆ ಜಾನಕಿಯವರು ಕೈ ಎತ್ತುವ ಮೂಲಕ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.

ಚುನಾವಣೆಯಲ್ಲಿ ಮತದಾನ ಮಾಡಲು ಪಾಲಿಕೆ ಸದಸ್ಯರು ಮತ್ತು ಸಂಸದರು, ಶಾಸಕರು, ಎಂಎಲ್ಸಿ ಗಳು ಸೇರಿ 65 ಜನರಿಗೆ ಮತದಾನದ ಹಕ್ಕಿತ್ತು. ಆದ್ರೆ ಬಿಜೆಪಿ ಶಾಸಕ ಅಭಯ ಪಾಟೀಲ್ ಹೊರತು ಪಡಿಸಿ ಉಳಿದ ಜನಪ್ರತಿನಿಧಿಗಳು ಚುನಾವಣೆ ಪ್ರಕ್ರಿಯೆ ಗೆ ಗೈರಾಗಿದ್ದರು.

ಹೀಗಾಗಿ 59 ಜನರು ಮೇಯರ್, ಉಪ ಮೇಯರ್ ಸ್ಥಾನಕ್ಕೆ ಮತದಾನದ ಹಕ್ಕು ಚಲಾಯಿಸಿದ್ರು. ಇದರಲ್ಲಿ ‌ಮೇಯರ್ ಅಭ್ಯರ್ಥಿ ಪ್ರೀತಿ ಕಾಮಕರ, ಉಪ ಮೇಯರ್ ಹನುಮಂತ ಕೊಂಗಾಲಿ ಪರ 39 ಮತಗಳು ಚಲಾವಣೆ ಆದ್ರೆ, ಅತ್ತ ಅನುಕ್ರಮವಾಗಿ ಖುರ್ಷಿದ್ ಮುಲ್ಲಾ ಮತ್ತು ಮೋದಿನ ಸಾಬ್ ಮತ್ತೇವಾಲೆ ಪರ ತಲಾ 20 ಮತಗಳು ಬಂದವು. ಹೀಗಾಗಿ ಸ್ಪಷ್ಟವಾದ ಬಹುಮತವಿದ್ದ ಕಾರಣಕ್ಕೆ ಬಿಜೆಪಿ ಅಭ್ಯರ್ಥಿಗಳು ಮೇಯರ್, ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತೆ ಜಾನಕಿ ಫಲಿತಾಂಶ ಘೋಷಣೆ ಮಾಡಿದ್ರು.

ಅತ್ತ ಬಿಜೆಪಿ ಶಾಸಕ ಅಭಯ ಪಾಟೀಲ್ ಮಾತನಾಡಿ, ಪಕ್ಷದ ತೀರ್ಮಾನದಂತೆ ಇಬ್ಬರನ್ನು ಆಯ್ಕೆ ಮಾಡಿದ್ದೇವೆ. ಈ ಬಾರಿ ನೇಕಾರ ಸಮುದಾಯಕ್ಕೆ ಮೇಯರ್ ಸ್ಥಾನ ಕೊಟ್ಟಿದ್ದೇವೆ ಎಂದು ಹೇಳಿದ್ರು.

ಇನ್ನೂ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ನಿರ್ಣಾಯಕ ಆಗಿರೋ ನೇಕಾರ ಸಮುದಾಯಕ್ಕೆ ಮೇಯರ್ ಪಟ್ಟ ಮತ್ತು ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ನಿರ್ಣಾಯಕ ಆಗಿರೋ ಲಿಂಗಾಯತ ಸಮುದಾಯಕ್ಕೆ ಉಪ ಮೇಯರ್ ಪಟ್ಟ ಕೊಡಲಾಗುತ್ತಿದೆ. ಕನ್ನಡಿಗರ ಕೋಟಾದಲ್ಲೂ ಮುಂದಿನ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ನೇಕಾರ, ಲಿಂಗಾಯತ ಜಾತಿ ಅಸ್ತ್ರ ಪ್ರಯೋಗಿಸಿದ್ದಾರೆ. ಈ ನಾಲ್ಕನೇ ಅವಧಿಯ ಮೇಯರ್ ಚುನಾವಣೆಯಿಂದ ಕೈ ನಾಯಕರು ಅಂತರ ಕಾಪಾಡಿಕೊಂಡಿದ್ದಾರೆ. ಪಾಲಿಕೆಯಲ್ಲಿ ಬಿಜೆಪಿ, ಕಾಂಗ್ರೆಸ್ ಅಂದ್ರೆ ಸಚಿವ ಸತೀಶ್ ಜಾರಕಿಹೊಳಿ‌, ಶಾಸಕ ಅಭಯ ಪಾಟೀಲ್ ಮಧ್ಯೆ ಜಿದ್ದಾಜಿದ್ದಿನ ಫೈಟ್ ನಡೆಯುತ್ತಲೇ ಇದೆ.

ಆದ್ರೆ ಈ ಚುನಾವಣೆಯಲ್ಲಿ ಆ ಕಾದಾಟ ಎಲ್ಲಿಯೂ ಕಂಡು ಬರಲಿಲ್ಲ. ಇತ್ತ ನೂತನ ಮೇಯರ್, ಉಪ ಮೇಯರ್ ಮಾತನಾಡಿ, ಬೆಳಗಾವಿ ನಗರದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಅಂತಾ ಭರವಸೆ ಕೊಟ್ಟಿದ್ದಾರೆ.

ಒಟ್ಟಿನಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇದೇ ಮೊದಲ ಬಾರಿಗೆ ಇಬ್ಬರೂ ಅಪ್ಪಟ ಕನ್ನಡಿಗರೇ ಮೇಯರ್, ಉಪ‌ ಮೇಯರ್ ಆಯ್ಕೆ ಆಗಿದ್ದಾರೆ. ಇನ್ನಾದ್ರೂ ಬೆಳಗಾವಿ ನಗರದಲ್ಲಿ ಕನ್ನಡ ಇನ್ನಷ್ಟು ಗಟ್ಟಿಗೊಳಿಸುವ ಕಾರ್ಯ ಮಾಡ್ತಾರಾ? ಇಲ್ಲವಾ? ಎನ್ನುವುದಕ್ಕೆ ಕಾಲವೇ ಉತ್ತರಿಸಲಿದೆ.

Edited By :
PublicNext

PublicNext

19/03/2026 11:45 am

Cinque Terre

14.88 K

Cinque Terre

2

ಸಂಬಂಧಿತ ಸುದ್ದಿ