ಚಾಮರಾಜನಗರ : ಪವಾಡ ಪುರುಷ ಮಾದಪ್ಪನ ಯುಗಾದಿ ಮಹಾ ರಥೋತ್ಸವ ಮಲೆ ಮಹದೇಶ್ವರಬೆಟ್ಟದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಉಘೇ ಉಘೇ ಮಾದಪ್ಪ ಎಂಬ ಝೇಂಕಾರಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆ 9.45ರಿಂದ 11 ಗಂಟೆಯ ಶುಭ ಮೂಹರ್ತದಲ್ಲಿ ಮಾದಪ್ಪನ ಯುಗಾದಿ ಮಹಾ ರಥೋತ್ಸವಕ್ಕೆ ಚಾಲನೆ ದೊರೆಯಿತು. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜರುಗಿದ ಮಹಾ ರಥೋತ್ಸವದಲ್ಲಿ ಭಕ್ತರು ಉಘೇ ಉಘೇ ಮಾದಪ್ಪ ಎನ್ನುವ ಘೋಷಣೆಗಳನ್ನು ಮೊಳಗಿಸಿ ಮಾಯಕಾರನ ಭಕ್ತಿರಸದಲ್ಲಿ ಮಿಂದೆದ್ದರು.
ಇನ್ನು ರಥದ ಜೊತೆಯಲ್ಲಿ ಹಸಿರು ಸೀರೆಯನ್ನುಟ್ಟು ಹಾಲರವಿಯನ್ನು ಹೊತ್ತಿದ್ದ ಬೇಡಗಂಪಣ್ಣ ಸಮು ದಾಯದ 101 ಹೆಣ್ಣುಮಕ್ಕಳ ಮೆರವಣಿಗೆ, ಹುಲಿ ವಾಹನ, ಬಸವ ವಾಹನ ಹಾಗೂ ರುದ್ರಾಕ್ಷಿ ವಾಹನಗಳು, ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದವು. ಮುಂಜಾನೆಯಿಂದಲೇ ಮಾದಪ್ಪನಿಗೆ ಬಿಲ್ವಾರ್ಚನೆ, ಎಣ್ಣೆಮಜ್ಜನ, ರುದ್ರಾಭಿಷೇಕ, ಪಂಚಾ ಮೃತ ಅಭಿಷೇಕ, ಕ್ಷೀರಾಭಿಷೇಕವನ್ನು ಶ್ರದ್ದಾಭಕ್ತಿಯಿಂದ ಬೇಡಗಂಪಣ ಅರ್ಚಕರು ನೆರವೇರಿಸಿದರು.
ಮಾದಪ್ಪನ ದರ್ಶನ ಪಡೆಯಲೆಂದು ಮಹದೇಶ್ವರಬೆಟ್ಟಕ್ಕೆ ಚಾಮರಾಜನಗರ ಸೇರಿದಂತೆ ಮಂಡ್ಯ, ಮೈಸೂರು, ರಾಮ ನಗರ, ಬೆಂಗಳೂರು ಹಾಗೂ ನೆರೆಯ ತಮಿಳುನಾಡು ರಾಜ್ಯದಿಂದ ಲಕ್ಷಾಂತರ ಮಂದಿ ಭಕ್ತರು ಕಾಲ್ನಡಿಗೆಯಲ್ಲಿ ಹಾಗೂ ವಾಹನಗಳಲ್ಲಿ ಯುಗಾದಿ ಜಾತ್ರಾ ಮಹೋತ್ಸವಕ್ಕೆ ಆಗಮಿಸಿ ಮಾದಪ್ಪನ ದರ್ಶನ ಪಡೆದರು.
ಪವಾಡ ಪುರುಷ ಮಾದಪ್ಪನ ದರ್ಶನ ಪಡೆದು ಹರಕೆ ತೀರಿಸಲು ಇತರೆಡೆಯಿಂದ ಬಂದಿದ್ದ ಭಕ್ತರು ಮಹಾ ರಥೋತ್ಸವಕ್ಕೆ ಹಣ್ಣು ದವನ ಎಸೆದರೆ, ಕೆಲವರು ಮಾದಪ್ಪನ ಮಹಾರಥವನ್ನು ಎಳೆದು ಪುನೀತರಾದರು.
ಒಟ್ಟಾರೆ ಪವಾಡ ಪುರುಷ ನೆಲೆಸಿರುವ ಮಹದೇಶ್ವರಬೆಟ್ಟದಲ್ಲಿ ನಡೆದ ಯುಗಾದಿ ಜಾತ್ರಾ ಮಹೋತ್ಸವದಲ್ಲಿ ಮಹಾ ರಥೋತ್ಸವ ಸಹಸ್ರಾರು ಸಂಖ್ಯೆಯ ಭಕ್ತ ವೃಂದದೊಂದಿಗೆ ವಿಜೃಂಭಣೆಯಿಂದ ಜರುಗಿ, ಉಘೇ ಉಘೇ ಮಾದಪ್ಪ, ಉಘೇ ಮಾಯ್ಕಾರ ಎಂಬ ಭಕ್ತರ ಝೇಂಕಾರ ಬೆಟ್ಟದ ತುಂಬೆಲ್ಲಾ ಝೇಂಕರಿಸಿತು.
Kshetra Samachara
19/03/2026 02:35 pm