ಚಾಮರಾಜನಗರ: ಪಾಲ್ಗುಣ ಮಾಸ ಬಂತೆಂದರೆ ಗ್ರಾಮೀಣ ಭಾಗದಲ್ಲಿ ಮಾರಿಹಬ್ಬಗಳ ಸಡಗರ, ಸಂಭ್ರಮ. ಕೆಲವೆಡೆ ಕೋಳಿ, ಕುರಿಗಳನ್ನು ಬಲಿ ಕೊಟ್ಟರೆ ಹಲವೆಡೆ ತಂಬಿಟ್ಟು, ಹೋಳಿಗೆಯನ್ನು ಮಾಡಿ ಗ್ರಾಮ ದೇವತೆಗಳಿಗೆ ಪೂಜೆ ಸಲ್ಲಿಸುತ್ತಾರೆ. ಆದರೆ, ಈ ಗ್ರಾಮದಲ್ಲಿ ಕುರಿಗಳ ರಕ್ತವನ್ನು ಹೀರುವ ವಿಚಿತ್ರ, ವಿಶೇಷ ಆಚರಣೆ ನಡೆದುಕೊಂಡು ಬಂದಿದೆ.
ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿ ಗ್ರಾಮದಲ್ಲಿ ವಿಜೃಂಭಣೆಯಿಂದ ದೊಡ್ಡಮ್ಮತಾಯಿ ಹಬ್ಬ ನಡೆಸಲಾಗಿದ್ದು, ಈ ವೇಳೆ ಹರಕೆಯ ಕುರಿಗಳ ಕುತ್ತಿಗೆಗೆ ಬಾಯಿ ರಕ್ತ ಹೀರಿ ದೇವರಿಗೆ ಸಂತೃಪ್ತಗೊಳಿಸಿದ ವಿಲಕ್ಷಣ ಘಟನೆ ನಡೆದಿದೆ.
ಪ್ರತಿ ಪಾಲ್ಗುಣ ಮಾಸದಲ್ಲಿ ನಡೆಯುವ ಗ್ರಾಮದ ದೊಡ್ಡಮ್ಮತಾಯಿ ಜಾತ್ರೆಯಲ್ಲಿ ಕುರಿ ರಕ್ತ ಹೀರುವ ಸಂಪ್ರದಾಯ ನಡೆದಿದೆ. ಅರ್ಚಕ ಮಾದಶೆಟ್ಟಿ ಎಂಬವರು ಕುರಿ ರಕ್ತ ಹೀರುವ ವಿಡಿಯೋ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ದೊಡ್ಡಮ್ಮತಾಯಿ ರಥದಲ್ಲಿ ನಿಂತಿರುವ ಅರ್ಚಕನಿಗೆ ಅಲ್ಲೇ ಬಲಿಕೊಟ್ಟ ಕುರಿಯನ್ನು ನೀಡಿದಾಗ ಹಲ್ಲಿನಿಂದ ಕಚ್ಚಿ ರಕ್ತ ಹೀರಿದರೆ ದೇವರನ್ನು ಸಂತೃಪ್ತಿಗೊಳಿಸಿದ ಹಾಗೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಹರಕೆ ಹೊತ್ತ ಭಕ್ತರು ಜಾತ್ರೆ ವೇಳೆ ಪ್ರಾಣಿಗಳನ್ನ ಬಲಿ ಕೊಡುವಾಗ ಅರ್ಚಕ ಪ್ರತಿ ಪ್ರಾಣಿಯನ್ನು ತನ್ನ ಹಲ್ಲಿನಿಂದ ಕಚ್ಚಿ ರಕ್ತ ಹೀರಿ ಕುಡಿಯುವುದು ತಲೆತಲಾಂತರಗಳಿಂದ ನಡೆದುಕೊಂಡು ಬಂದಿದೆ. ಸಂಬಂಧಿಕರನ್ನು ಕರೆಸಿ ಬಲಿಕೊಟ್ಟ ಕುರಿಯಿಂದ ಖಾದ್ಯ ತಯಾರಿಸಿ ಉಣ ಬಡಿಸುತ್ತೇವೆ ಎಂದು ಅಣ್ಣೂರುಕೇರಿ ಭಕ್ತರು.
ಒಟ್ಟಿನಲ್ಲಿ ಗ್ರಾಮಾಂತರ ಭಾಗದಲ್ಲಿ ಮಾರಿಹಬ್ಬಗಳೆಂದರೆ ಒಂದೊಂದು ವಿಶೇಷವಾಗಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಚಾಮರಾಜನಗರ ತಾಲೂಕಿನ ಗೂಳಿಪುರ ಗ್ರಾಮದಲ್ಲಿ ಮುಳ್ಳಿನ ಪೊದೆಗೆ ಹಾರಿ ಗ್ರಾಮದೇವತೆ ಹಬ್ಬ ಆಚರಣೆ ನಡೆಸಿದ್ದರು.
ಮುಳ್ಳಿನ ಪೊದೆಗೆ ಹಾರಿದರೂ ಸಹ ಯಾರಿಗೂ ಏನು ಆಗೋದಿಲ್ಲ. ಈ ರೀತಿ ಹಬ್ಬ ಆಚರಣೆ ಮಾಡಿದರೆ ದೇವತೆಗಳು ಸಂತೃಪ್ತರಾಗಲಿದ್ದಾರೆ ಎಂಬುದು ಭಕ್ತರ ನಂಬಿಕೆ. ಅದೇ ರೀತಿ, ಅಣ್ಣೂರು ಕೇರಿಯಲ್ಲೂ ಕುರಿಗಳ ರಕ್ತವನ್ನು ಹೀರಿ ವಿಶೇಷ ಆಚರಣೆ ಮಾಡಲಾಗಿದೆ.
PublicNext
08/03/2026 05:24 pm