ಚಿಕ್ಕಮಗಳೂರು: ಬಿಜೆಪಿ ಮತ್ತು ಬಜರಂಗದಳದ ಕಾರ್ಯಕರ್ತರ ಗಡಿಪಾರಿಗೆ ಪೊಲೀಸ್ ಇಲಾಖೆ ಶಿಫಾರಸ್ಸು ಮಾಡಿರುವುದನ್ನು ಖಂಡಿಸಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಮತ್ತು ಭಜರಂಗದಳದ ಹಾಸನ ವಿಭಾಗದ ಸಂಚಾಲಕ ಶ್ಯಾಮ್ ಅವರನ್ನು ಗಡಿಪಾರು ಮಾಡಲು ಪೊಲೀಸರು ಮುಂದಾಗಿರುವುದು ಸರ್ವಾಧಿಕಾರಿ ಮಾನಸಿಕತೆಯ ಪ್ರದರ್ಶನ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಇಬ್ಬರು ಕಾರ್ಯಕರ್ತರು ನ್ಯಾಯದ ಪರವಾಗಿ ಹಾಗೂ ಅನ್ಯಾಯದ ವಿರುದ್ಧ ಹೋರಾಡುವ ವೈಚಾರಿಕ ಬದ್ಧತೆ ಹೊಂದಿರುವವರಾಗಿದ್ದು, ಸೈದ್ಧಾಂತಿಕ ಹೋರಾಟ ಮಾಡುವವರನ್ನು ಕ್ರಿಮಿನಲ್‌ಗಳಂತೆ ಚಿತ್ರಿಸುತ್ತಿರುವುದು ಖಂಡನೀಯ ಎಂದು ಅವರು ಕಿಡಿಕಾರಿದ್ದಾರೆ.
ಪೊಲೀಸ್ ಇಲಾಖೆಯು ನೋಟಿಸ್‌ನಲ್ಲಿ ‘ಗುಂಡಾ’ ಮತ್ತು ‘ಹಫ್ತಾ ವಸೂಲಿ’ಯಂತಹ ಪದಗಳನ್ನು ಬಳಸಿರುವುದು ಕ್ಷಮಿಸಲಾರದ ಅಪರಾಧ ಎಂದು ಆಕ್ಷೇಪಿಸಿದ ಸಿ.ಟಿ. ರವಿ, ಕಾಂಗ್ರೆಸ್ ಸರ್ಕಾರವು ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ವಿರೋಧ ಪಕ್ಷದವರನ್ನು ಹೆದರಿಸಲು ಹಳೆಯ ತಂತ್ರಗಳನ್ನು ಬಳಸುತ್ತಿದೆ ಎಂದು ಟೀಕಿಸಿದ್ದಾರೆ.
ಬ್ರಿಟಿಷರ ಕಾಲದ ಅಡಳಿತದಂತೆ ವರ್ತಿಸುತ್ತಿರುವ ಇಂತಹ ಬೆದರಿಕೆಗಳಿಗೆ ತಾವು ಮತ್ತು ತಮ್ಮ ಪಕ್ಷದ ಕಾರ್ಯಕರ್ತರು ಹೆದರುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಗಡಿಪಾರು ನೋಟಿಸ್ ನೀಡಿರುವುದನ್ನು ಪಕ್ಷವು ಒಂದು ಸವಾಲಾಗಿ ಸ್ವೀಕರಿಸಿದ್ದು, ಈ ಹೋರಾಟವನ್ನು ನ್ಯಾಯಾಲಯ ಹಾಗೂ ಜನತಾ ನ್ಯಾಯಾಲಯದ ಮುಂದೆ ಕೊಂಡೊಯ್ಯುವುದಾಗಿ ಅವರು ತಿಳಿಸಿದ್ದಾರೆ.
ಇಡೀ ಬಿಜೆಪಿ ತಂಡವು ಕಾರ್ಯಕರ್ತರ ಬೆನ್ನಿಗೆ ನಿಲ್ಲಲಿದ್ದು, ಎಷ್ಟು ಜನರನ್ನು ಬಂಧಿಸುತ್ತೀರೋ ಅಥವಾ ಗಡಿಪಾರು ಮಾಡುತ್ತೀರೋ ಮಾಡಿ ನೋಡಿ ಎಂದು ಜಿಲ್ಲಾಡಳಿತಕ್ಕೆ ಸವಾಲು ಹಾಕಿದ್ದಾರೆ.
PublicNext
19/03/2026 04:38 pm
LOADING...