ಬೆಳಗಾವಿ: ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬೆಳಗಾವಿ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ಅದರ ಭಾಗವಾಗಿ, ಬೆಳಗಾವಿ ಪೊಲೀಸ್ ಕಮೀಷನರ್ ಭೂಷಣ್ ಬೊರಸೆ, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ಮೂವರು ನಟೋರಿಯಸ್ ಆರೋಪಿಗಳಿಗೆ ಗಡಿಪಾರು ಶಿಕ್ಷೆ ವಿಧಿಸಿ ಶಾಕ್ ನೀಡಿದ್ದಾರೆ. ಹೊಸ ವರ್ಷದ ಯುಗಾದಿ ಹಬ್ಬದ ದಿನವೇ ಈ ಮಹತ್ವದ ಆದೇಶ ಹೊರಡಿಸಲಾಗಿದೆ.
ಗಡಿಪಾರಾದ ಆರೋಪಿಗಳ ವಿವರ
ಮಟ್ಕಾ ಜೂಜಾಟ, ಗಾಂಜಾ ಮಾರಾಟ ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಸರ್ಫರಾಜ್ ಶೇಖ್, ವಿನಾಯಕ ಕೊಲ್ಲಾಪುರಿ ಹಾಗೂ ಸಾಗರ ಸಾಲಗುಡೆ ಎಂಬುವರನ್ನು ಗಡಿಪಾರು ಮಾಡಲಾಗಿದೆ. ಈ ಮೂವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದರೂ, ಪದೇ ಪದೇ ಎಚ್ಚರಿಕೆ ನೀಡಿದರೂ ಇವರು ತಮ್ಮ ಕಾನೂನುಬಾಹಿರ ಚಟುವಟಿಕೆಗಳನ್ನು ನಿಲ್ಲಿಸಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
6 ತಿಂಗಳ ಗಡಿಪಾರು ಮತ್ತು ಮುಂದುವರಿಯುವ ಕಠಿಣ ಕ್ರಮ
ಈ ಹಿನ್ನೆಲೆಯಲ್ಲಿ, ಮೂವರನ್ನೂ ಆರು ತಿಂಗಳ ಅವಧಿಗೆ ಬೆಳಗಾವಿ ನಗರ ಮತ್ತು ಜಿಲ್ಲೆಯ ವ್ಯಾಪ್ತಿಯಿಂದ ಹೊರಗೆ ಗಡಿಪಾರು ಮಾಡಲಾಗಿದೆ. ಸರ್ಫರಾಜ್ ಶೇಖ್ ಅವರನ್ನು ವಿಜಯಪುರಕ್ಕೆ, ವಿನಾಯಕ ಕೊಲ್ಲಾಪುರಿ ಅವರನ್ನು ಕಾರವಾರಕ್ಕೆ ಹಾಗೂ ಸಾಗರ ಸಾಲಗುಡೆ ಅವರನ್ನು ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡುವಂತೆ ಆದೇಶಿಸಲಾಗಿದೆ. ನಗರದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಇಂತಹ ಕಠಿಣ ಕ್ರಮಗಳು ಮುಂದೆಯೂ ಮುಂದುವರೆಯಲಿವೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
PublicNext
19/03/2026 07:18 pm
LOADING...