ಬೆಳಗಾವಿ: ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಯ ಕನ್ನೇರಿ ಕಾಡಸಿದ್ಧೇಶ್ವರ ಮಠದ ಕಾಡಸಿದ್ಧೇಶ್ವರ ಸ್ವಾಮಿಗಳು ತಮ್ಮ ಹೆಸರನ್ನು ಉಲ್ಲೇಖಿಸಿ ಮಾಡಿರುವ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿ, ಡಂಬಳ-ಗದಗ ತೋಂಟದಾರ್ಯ ಮಠದ ಶ್ರೀ ತೋಂಟದ ಸಿದ್ಧರಾಮ ಸ್ವಾಮಿಗಳು ಅಧಿಕೃತ ಪ್ರಕಟಣೆ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.
ಅನುವಾದಿತ ಗ್ರಂಥದ ಕುರಿತು ಸ್ಪಷ್ಟನೆ
ಕಾಡಸಿದ್ಧೇಶ್ವರ ಸ್ವಾಮಿಗಳು, "ಒಬ್ಬ ಸ್ವಾಮಿ" ಎಂಬ ಏಕವಚನ ಬಳಸಿ, ತಾವು ಮರಾಠಿ ಭಾಷೆಯ ಕುರಾನನ್ನು ಕನ್ನಡಕ್ಕೆ ಅನುವಾದಿಸಿ ಮಠದಿಂದಲೇ ಪ್ರಕಟಿಸಿ ಹಂಚಿರುವುದಾಗಿ ಆರೋಪಿಸಿದ್ದಾರೆ ಎಂದು ಶ್ರೀ ಸಿದ್ಧರಾಮ ಸ್ವಾಮೀಜಿ ತಿಳಿಸಿದ್ದಾರೆ. ಆದರೆ, ವಾಸ್ತವವಾಗಿ ನಾವು ಅನುವಾದಿಸಿರುವುದು ಹಿಂದೂ ಧರ್ಮದ ಶ್ರೇಷ್ಠ ಸಂತ ವಿನೋಬಾ ಭಾವೆ ಅವರ ಹಿಂದಿ ಭಾಷೆಯ "ಇಸ್ಲಾಂ ಧರ್ಮ ಸಂದೇಶ" ಎಂಬ ಕೃತಿಯನ್ನು. ಇದು ಕುರಾನ್ ಆಗಲಿ, ಮರಾಠಿ ಭಾಷೆಯ ಕೃತಿಯಾಗಲಿ ಅಲ್ಲ. ಅಲ್ಲದೆ, ಇದನ್ನು ನಮ್ಮ ಮಠದಿಂದ ಪ್ರಕಟಿಸಲಾಗಿಲ್ಲ. ಈ ಕೃತಿಯನ್ನು ಪೂಜ್ಯಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಲೋಕಾರ್ಪಣೆ ಮಾಡಲಾಗಿತ್ತು. ಅಚ್ಚರಿಯೆಂದರೆ, ಈ ಕಾರ್ಯಕ್ರಮಕ್ಕೆ ಶ್ರೀ ಕಾಡಸಿದ್ಧೇಶ್ವರ ಸ್ವಾಮಿಗಳನ್ನೂ ಆಹ್ವಾನಿಸಲಾಗಿತ್ತು ಎಂಬುದು ಸತ್ಯ ಸಂಗತಿ ಎಂದು ಸಿದ್ಧರಾಮ ಸ್ವಾಮೀಜಿ ಹೇಳಿದ್ದಾರೆ.
ಭಗವದ್ಗೀತೆ ನಿಂದನೆ ಆರೋಪ ನಿರಾಕರಣೆ
ಕನ್ನೇರಿ ಶ್ರೀಗಳು ತಾವು ಭಗವದ್ಗೀತೆಯನ್ನು ನಿಂದಿಸಿದ್ದೇವೆ ಎಂದೂ ಆರೋಪಿಸಿದ್ದಾರೆ. ಇದಕ್ಕೆ ಯಾವುದೇ ಆಧಾರಗಳಿದ್ದರೆ ಒದಗಿಸಲಿ ಎಂದು ಸಿದ್ಧರಾಮ ಸ್ವಾಮೀಜಿ ಸವಾಲು ಹಾಕಿದ್ದಾರೆ. "ಸ್ವಧರ್ಮ ನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆಯನ್ನು ರೂಢಿಸಿಕೊಂಡಿರುವ ನಾವು ಯಾವುದೇ ಧರ್ಮ, ದೇವರು ಅಥವಾ ಭಗವದ್ಗೀತೆಯನ್ನು ಎಂದಿಗೂ ನಿಂದಿಸಿಲ್ಲ. ನಿಂದಿಸಿದ್ದೇವೆ ಎಂಬುದು ದುರುದ್ದೇಶಪೂರಿತ ಸುಳ್ಳು ಆರೋಪ" ಎಂದು ಅವರು ಸ್ಪಷ್ಟಪಡಿಸಿದ್ದಾರೆ. ವಾಸ್ತವವಾಗಿ, ಡಾ. ಚಂದ್ರಧರ ಶರ್ಮಾ ಅವರ ‘ಭಾರತೀಯ ತತ್ತ್ವಶಾಸ್ತ್ರ’ ಕೃತಿಯಲ್ಲಿನ ಭಗವದ್ಗೀತೆಯ ಭಾಗವನ್ನು ತಾವು ಸುಂದರವಾಗಿ ಅನುವಾದಿಸಿರುವುದಾಗಿ ಮತ್ತು ಪೂಜ್ಯ ಶ್ರೀ ಸಿದ್ಧೇಶ್ವರ ಶ್ರೀಗಳು ರಚಿಸಿದ ಭಗವದ್ಗೀತಾ ಪ್ರವಚನದ ಕರಡು ಪ್ರತಿಯನ್ನು ಶ್ರದ್ಧೆಯಿಂದ ತಿದ್ದಿಕೊಟ್ಟಿರುವುದಾಗಿ ಅವರು ತಿಳಿಸಿದ್ದಾರೆ. ಇಷ್ಟೆಲ್ಲಾ ಇದ್ದರೂ ಕನ್ನೇರಿ ಶ್ರೀಗಳು ಇಂತಹ ಆಧಾರರಹಿತ ಆರೋಪಗಳನ್ನು ಪದೇ ಪದೇ ಮಾಡುತ್ತಿರುವುದರ ಉದ್ದೇಶ ಅರ್ಥವಾಗುತ್ತಿಲ್ಲ ಎಂದು ಸಿದ್ಧರಾಮ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ್ದಾರೆ.
ನಿರಂತರ ಸುಳ್ಳು ಆರೋಪಗಳ ಹಿಂದಿನ ಉದ್ದೇಶ
ಕನ್ನೇರಿ ಶ್ರೀಗಳ ಈ ನಿರರ್ಥಕ ಆರೋಪಗಳ ಹಿಂದಿನ ಉದ್ದೇಶ ಒಬ್ಬ ವ್ಯಕ್ತಿಯ ಚಾರಿತ್ರ್ಯಹನನ ಮಾಡುವುದು ಮತ್ತು ಒಂದು ಧರ್ಮದವರನ್ನು ವ್ಯಕ್ತಿಯ ವಿರುದ್ಧ ಎತ್ತಿಕಟ್ಟುವ ಮೂಲಕ ದ್ವೇಷವನ್ನು ಹರಡುವುದೇ ಆಗಿದೆ. ಸುಳ್ಳು ಆರೋಪಗಳ ಮೂಲಕ ತಮ್ಮ ಚಾರಿತ್ರ್ಯಹನನಕ್ಕೆ ಅವರು ಪ್ರಯತ್ನಿಸುತ್ತಿರುವುದು ಇದು ಮೂರನೆಯ ಬಾರಿ ಎಂದು ಶ್ರೀ ಸಿದ್ಧರಾಮ ಸ್ವಾಮೀಜಿ ತಿಳಿಸಿದ್ದಾರೆ. ಇಂತಹ ಕೃತ್ಯಗಳಿಂದ ಸಮಾಜದಲ್ಲಿ ಅಶಾಂತಿ ಮತ್ತು ಗೊಂದಲ ಸೃಷ್ಟಿಯಾಗುತ್ತಿದೆ.
ನ್ಯಾಯಾಲಯದ ಛೀಮಾರಿ
ಕನ್ನೇರಿ ಶ್ರೀಗಳ ವರ್ತನೆ ಕುರಿತು ಈಗಾಗಲೇ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಛೀಮಾರಿ ಹಾಕಿವೆ. ಅವರ ಮಾತುಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಾಲಯಗಳು ಸ್ಪಷ್ಟಪಡಿಸಿದ್ದರೂ, ಅವರು ಪದೇ ಪದೇ ಅನಾಗರಿಕರಂತೆ ವರ್ತಿಸುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ಶ್ರೀಗಳು ವಿಷಾದ ವ್ಯಕ್ತಪಡಿಸಿದ್ದಾರೆ.
ಸ್ಪಷ್ಟೀಕರಣದ ಹಿಂದಿನ ಕಾರಣ
ಕನ್ನೇರಿ ಶ್ರೀಗಳು ಮಾಡಿದ ಸುಳ್ಳು ಆರೋಪಗಳನ್ನೇ ಜನರು ನಿಜವೆಂದು ಭಾವಿಸಬಾರದು ಮತ್ತು ಶ್ರೀಮಠದ ಸಮಸ್ತ ಸದ್ಭಕ್ತರ ಆಗ್ರಹದ ಮೇರೆಗೆ ಈ ಸ್ಪಷ್ಟೀಕರಣವನ್ನು ನೀಡಲಾಗಿದೆ ಎಂದು ಶ್ರೀ ಸಿದ್ಧರಾಮ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
PublicNext
20/03/2026 09:16 pm