ಬೆಳಗಾವಿ: ಬೆಳಗಾವಿ ಜಿಲ್ಲೆಯ ಉಕ್ಕಡ ಗ್ರಾಮದಲ್ಲಿ 15 ದಿನದ ಹಸುಗೂಸಿನ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಹೆಣ್ಣು ಮಗು ಜನಿಸಿದ ಕಾರಣಕ್ಕೆ ತಂದೆಯೇ ವಿಷವಿಕ್ಕಿ ಕೊಂದಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಸಂಬಂಧ ಆರೋಪಿ ತಂದೆ ಭೀಮರಾಯ ಚಿಪ್ಪಾಡೆಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ತಾಲೂಕಿನ ಉಕ್ಕಡ ಗ್ರಾಮದ ನಿವಾಸಿಯಾದ ಭೀಮರಾಯ ಮತ್ತು ಶೀಲಾ ದಂಪತಿಗೆ ಒಂದು ವರ್ಷದ ಹಿಂದೆ ವಿವಾಹವಾಗಿತ್ತು. ಕೂಲಿ ಕೆಲಸ ಮಾಡುತ್ತಿದ್ದ ಭೀಮರಾಯನಿಗೆ ಗಂಡು ಮಗುವಿನ ಆಸೆ ಇತ್ತೆನ್ನಲಾಗಿದೆ. ಆದರೆ, 15 ದಿನಗಳ ಹಿಂದೆ ಶೀಲಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದರಿಂದ ಭೀಮರಾಯ ಅಸಮಾಧಾನಗೊಂಡಿದ್ದ ಎನ್ನಲಾಗಿದೆ.
ಮಾರ್ಚ್ 17ರಂದು ಪತ್ನಿಯ ತವರು ಮನೆಗೆ ಭೇಟಿ ನೀಡಿ ಮಗುವನ್ನು ನೋಡಿ ಬಂದ ಬೆನ್ನಲ್ಲೇ ಶಿಶು ಏಕಾಏಕಿ ಅಸ್ವಸ್ಥಗೊಂಡಿದೆ. ತಕ್ಷಣ ಮಗುವನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.
ಹತ್ತಿ ಬೆಳೆಗೆ ಸಿಂಪಡಿಸುವ ವಿಷಕಾರಿ ಔಷಧಿಯನ್ನು ಮಗುವಿಗೆ ನೀಡಲಾಗಿದೆ ಎಂಬ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಮಗುವಿನ ತಾಯಿ ಶೀಲಾ ಅವರು ಕಾಕತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೆತ್ತಿಕೊಂಡಾಗ ತಂದೆಯ ಕುಕೃತ್ಯ ಬಯಲಾಗಿದೆ. ಘಟನೆ ಬಳಿಕ ನಾಪತ್ತೆಯಾಗಿದ್ದ ಭೀಮರಾಯನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ನಂತರ ಸಾವಿನ ನಿಖರ ಕಾರಣ ಅಧಿಕೃತವಾಗಿ ತಿಳಿಯಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
PublicNext
20/03/2026 09:34 pm
LOADING...