ಶಿವಮೊಗ್ಗ : ಹಣದಾಸೆಗಾಗಿ ಸರ್ಕಾರಿ ದಾಖಲೆಗಳನ್ನು ನಕಲಿ ಮಾಡಿ, ಖಾಸಗಿ ವ್ಯಕ್ತಿಗಳಿಗೆ ಜಮೀನು ಮಂಜೂರು ಮಾಡಲು ಪ್ರಯತ್ನಿಸುತ್ತಿದ್ದ ಸಾಗರ ತಹಶೀಲ್ದಾರ್ ಕಚೇರಿ ಸಿಬ್ಬಂದಿಗಳ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಿಸಿ, ವಿಚಾರಣೆ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಇಂತಹ ವಿಚಾರಗಳಿಂದ ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.
ಸಾಗರ ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳು ಜಮೀನು ಮಂಜೂರು ಮಾಡಿಸುವುದಾಗಿ ಖಾಸಗಿ ವ್ಯಕ್ತಿಗಳಿಂದ ಹಣ ಪಡೆದು ಸರ್ಕಾರಿ ದಾಖಲೆಗಳನ್ನು ನಕಲಿ ಮಾಡುತ್ತಿದ್ದ ಜಾಲವೊಂದನ್ನು ಸಾಗರ ತಹಶೀಲ್ದಾರ್ ರಶ್ಮಿ ಹಾಲೇಶ್ ಅವರು ಬಯಲಿಗೆಳೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದ ಆರು ಜನ ಆರೋಪಿಗಳ ವಿರುದ್ಧ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ, ವಿಚಾರಣೆ ಆರಂಭಿಸಲಾಗಿದೆ.
ಮಾರ್ಚ್ 18ರ ಬುಧವಾರ ಮಧ್ಯಾಹ್ನ ತಹಶೀಲ್ದಾರ್ ಕಚೇರಿಯ ದಾಖಲೆ ಕೊಠಡಿಯ ಮೇಲ್ವಿಚಾರಕರು ಹಳೆಯ ಮಂಜೂರಾತಿ ಪತ್ರಗಳನ್ನು ತಿದ್ದುಪಡಿ ಮಾಡುತ್ತಿರುವುದನ್ನು ತಹಶೀಲ್ದಾರ್ ಅವರು ಖುದ್ದಾಗಿ ಗಮನಿಸಿದ್ದಾರೆ. ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಲು ನಕಲಿ ದಾಖಲೆ ಸೃಷ್ಟಿಸುವ ಕೆಲಸ ಇಲ್ಲಿ ನಡೆಯುತ್ತಿತ್ತು. ಸಾಗರ ತಹಶೀಲ್ದಾರ್ ಕಚೇರಿಯಲ್ಲಿ ಈ ಕಾರ್ಯವೆಸಗುತ್ತಿದ್ದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು , ಹೀಗೆ ಯಾವುದೇ ಸರ್ಕಾರಿ ದಾಖಲೆಗಳನ್ನು ನಕಲು ಮಾಡಿ, ಜಮೀನು ಮಂಜೂರು ಮಾಡಲು ಬರುವುದಿಲ್ಲ. ಆದ್ದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಅವರು ಮನವಿ ಮಾಡಿದ್ದಾರೆ.
PublicNext
20/03/2026 08:55 pm
LOADING...