ಮಂಗಳೂರು : ಐಷಾರಾಮಿ ಫಾರ್ಚುನರ್ ಕಾರಿನಲ್ಲಿ ಹೈಟೆಕ್ ಮಾದರಿಯಲ್ಲಿ ಜಾನುವಾರು ಕಳವು ಮಾಡುತ್ತಿದ್ದ ಜಾಲವೊಂದನ್ನು ಬಜಪೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಪೊಲೀಸರ ಕಾರ್ಯಾಚರಣೆ ವೇಳೆ ನಾಲ್ಕು ಹಸುಗಳನ್ನು ರಕ್ಷಿಸಿ, ಇಬ್ಬರು ಆರೋಪಿಗಳನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಬಜಪೆ ಪೇಜಾವರ ನಿವಾಸಿ, ಸದ್ಯ ಪೆರ್ಮುದೆ ಭಟ್ರಕೆರೆ ನಿವಾಸಿ ನಿಸಾರ್ ಯಾನೆ ನಿಸಾರ್ ಯಾನೆ ಪೆರ್ಮಂಕಿ ನಿಸಾರುದ್ದೀನ್ (28), ಕಾಂತರಬೆಟ್ಟು ನಿವಾಸಿ ಮೊಹಮ್ಮದ್ ಜಮಾಲುದ್ದೀನ್ ಯಾನೆ ಜಮಾಲ್ (24) ಬಂಧಿತ ಆರೋಪಿಗಳು.
ಬುಧವಾರ ಮುಂಜಾನೆ ಸುಮಾರು 4ಗಂಟೆ ಸುಮಾರಿಗೆ ಎಡಪದವು ಸಮೀಪದ ಶಾಸ್ತಾವು ದೇವಸ್ಥಾನದ ಬಳಿ ಫಾರ್ಚುನರ್ ಕಾರಿನಲ್ಲಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ದಾಳಿ ನಡೆಸಲು ಸನ್ನದ್ಧರಾಗಿದ್ದಾರೆ. ಪೊಲೀಸರನ್ನು ಕಂಡೊಡನೆ ಕಾರಿನಲ್ಲಿದ್ದ ಮೂವರು ಆರೋಪಿಗಳು ಕೈಯಲ್ಲಿದ್ದ ತಲವಾರುಗಳನ್ನು ಝಳಪಿಸುತ್ತಾ ಕತ್ತಲಿನಲ್ಲಿ ಪರಾರಿಯಾಗಿದ್ದರು.
ಈ ವೇಳೆ ಪರಿಶೀಲನೆ ನಡೆಸಿದಾಗ ಕಾರಿನೊಳಗೆ ನಾಲ್ಕು ದನಗಳ ಕಾಲುಗಳನ್ನು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಕಳ್ಳರು ಪೊಲೀಸರ ಕಣ್ಣು ತಪ್ಪಿಸಲು ಕಾರಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿದ್ದರು ಎನ್ನಲಾಗಿದ್ದು, ಕಾರಿನ ಒಳಭಾಗದಲ್ಲಿ ಅಸಲಿ ನಂಬರ್ ಪ್ಲೇಟ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಫಾರ್ಚುನರ್ ಕಾರು (ಅಂದಾಜು ಮೌಲ್ಯ 8 ಲಕ್ಷ), 4 ಹಸುಗಳು (ಅಂದಾಜು ಮೌಲ್ಯ 42,000) ಒಟ್ಟು 8,42,000 ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಕಳೆದ ಕೆಲವು ಸಮಯದಿಂದ ಎಡಪದವು, ಮಿಜಾರು ಮತ್ತು ದಡ್ಡಿ ಪ್ರದೇಶಗಳಲ್ಲಿ ಜಾನುವಾರು ಕಳ್ಳತನದ ಜಾಲ ತಣ್ಣಗಾಗಿತ್ತು. ಆದರೆ ಇದೀಗ ಐಷಾರಾಮಿ ಕಾರುಗಳನ್ನು ಬಳಸಿಕೊಂಡು ಮತ್ತೆ ಫೀಲ್ಡಿಗಿಳಿದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
PublicNext
21/03/2026 05:34 pm