ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಮುಂದುವರೆದ ಬೀದಿ ನಾಯಿಗಳ ಅಟ್ಟಹಾಸ - ಓರ್ವ ಯುವಕ ಕೋಮಾಗೆ ಮತ್ತೊಬ್ಬರಿಗೆ ಗಂಭೀರ ಗಾಯ

ಬೆಳಗಾವಿ: ಬೆಳಗಾವಿಯಲ್ಲಿ ಬೀದಿ ನಾಯಿಗಳ ಹಾವಳಿಯೂ ಭಯಾನಕ ಸ್ವರೂಪ ಪಡೆದುಕೊಂಡಿದೆ. ಒಂದೇ ದಿನದಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹುಕ್ಕೇರಿ ತಾಲೂಕಿನ ಹುಲ್ಲೋಳಿ ಹಟ್ಟಿ ಗ್ರಾಮದ ಯುವಕನ ಮೇಲೆ ಬೀದಿ ನಾಯಿಗಳು ಭೀಕರವಾಗಿ ದಾಳಿ ಮಾಡಿವೆ. ಪರಿಣಾಮ ಯುವಕ ಕೋಮಾ ಸ್ಥಿತಿಗೆ ತಲುಪಿದ್ರೆ, ಬೆಳಗಾವಿ ನಗರದಲ್ಲೂ ವ್ಯಕ್ತಿಯ ಮೇಲೆ ನಾಯಿ ದಾಳಿ ಮಾಡಿದೆ.

ಬೀದಿ ನಾಯಿಗಳ ರಣಭೀಕರ ದಾಳಿಗೊಳಗಾದ ಬಸವರಾಜ ಹೆಬ್ಬಾಳಿ ಗಂಭೀರವಾಗಿ ಗಾಯಗೊಂಡು ಈಗ ಕೋಮಾ ಸ್ಥಿತಿಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾನೆ. ಬೈಕ್ ಮೇಲೆ ಹೊಲಕ್ಕೆ ಹೋಗುವಾಗ ಬೆನ್ನಟ್ಟಿದ ಬೀದಿ ನಾಯಿಗಳು ಏಕಾಏಕಿ ಗುಂಪಾಗಿ ಬಸವರಾಜನ ಮೇಲೆ ದಾಳಿ ನಡೆಸಿವೆ.

ಬೀದಿ ನಾಯಿಗಳು ಭೀಕರವಾಗಿ ಕಚ್ಚಿ ಎಳೆದಾಡಿದ ಹಿನ್ನೆಲೆ ಬಸವರಾಜ ಪ್ರಜ್ಞಾಹೀನ ಸ್ಥಿತಿಗೆ ತಲುಪಿ ನಡುರಸ್ತೆಯಲ್ಲೇ ರಕ್ತಸಿಕ್ತವಾಗಿ ಬಿದ್ದಿದ್ದ. ಆತನನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಪ್ರಾಣ ಉಳಿಸಿದ್ದಾರೆ.

ದಾಳಿಯ ಬಗ್ಗೆ ಆತನ ಸಂಬಂಧಿಕರು ಪ್ರತಿಕ್ರಿಯೆ ನೀಡಿದ್ದಾರೆ. ಘಟನೆ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಲ್ಲೋಳಿ ಹಟ್ಟಿ ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೊಸದೇನಲ್ಲ. ದಿನನಿತ್ಯ ಜನರು ಭಯದಲ್ಲಿ ಜೀವನ ನಡೆಸುತ್ತಿದ್ದಾರೆ. ಮಕ್ಕಳು ಶಾಲೆಗೆ ಹೋಗಲು ಹೆದರುತ್ತಿದ್ದಾರೆ. ಆದರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಹದಿನೈದು ದಿನಗಳ ಹಿಂದಷ್ಟೇ 3ವರ್ಷದ ಬಾಲಕಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದು ಆ ಬಾಲಕಿಯೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಷ್ಟೆಲ್ಲಾ ಆದ್ರೂ ಅಧಿಕಾರಿಗಳ ನಿರ್ಲಕ್ಷಕ್ಕೆ

ಜನ ಸಿಟ್ಟಿಗೆದ್ದಿದ್ದಾರೆ.

ಬೆಳಗಾವಿ ನಗರ ಮತ್ತು ಜಿಲ್ಲಾ ವ್ಯಾಪ್ತಿಯಲ್ಲೂ ಬೀದಿ ನಾಯಿಗಳ ಭಯಾನಕ ದಾಳಿಗೆ ಜನ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕೂಡಲೇ ಬೀದಿ ನಾಯಿಗಳ ನಿಯಂತ್ರಣ, ಲಸಿಕೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆಗಳು ಎದ್ದಿದ್ದು ಸಂಬಂಧಿತ ಇಲಾಖೆಗಳು ತಕ್ಷಣ ಕ್ರಮ ಕೈಗೊಳ್ಳಬೇಕಿದೆ.

ಪ್ರಲ್ಹಾದ ಪೂಜಾರಿ, ಪಬ್ಲಿಕ್ ನೆಕ್ಸ್ಟ್, ಬೆಳಗಾವಿ

Edited By :
PublicNext

PublicNext

01/04/2026 07:38 pm

Cinque Terre

15.35 K

Cinque Terre

0