ಮೂಡಿಗೆರೆ: ತಾಲ್ಲೂಕಿನಾದ್ಯಂತ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಎಲ್ಲಾ ಧಾರ್ಮಿಕ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ಪೀಸ್ & ಅವೇರ್‌ನೆಸ್ ಟ್ರಸ್ಟ್ ಒತ್ತಾಯಿಸಿದೆ.
ಟ್ರಸ್ಟಿನ ಸಂಸ್ಥಾಪಕ ಅಲ್ತಾಫ್ ಬಿಳಗುಳ ಅವರ ನೇತೃತ್ವದ ನಿಯೋಗವು ಮೂಡಿಗೆರೆ ಠಾಣಾಧಿಕಾರಿಗಳನ್ನು ಭೇಟಿ ಮಾಡಿ ಈ ಕುರಿತು ಅಧಿಕೃತ ಮನವಿ ಪತ್ರ ಸಲ್ಲಿಸಿತು. ತಾಲ್ಲೂಕಿನ ಮಸೀದಿ, ದೇವಾಲಯ, ಚರ್ಚ್‌ಗಳೂ ಸೇರಿದಂತೆ ಬಸ್ ನಿಲ್ದಾಣ, ಮಾರುಕಟ್ಟೆ, ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಕಣ್ಗಾವಲು ಹೆಚ್ಚಿಸುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಕಳ್ಳತನ, ಶಾಂತಿ ಭಂಗ ತರುವಂತಹ ಘಟನೆಗಳು ಮತ್ತು ಅಹಿತಕರ ಕೃತ್ಯಗಳಿಗೆ ಬ್ರೇಕ್ ಹಾಕಲು ತಂತ್ರಜ್ಞಾನದ ಬಳಕೆ ಅನಿವಾರ್ಯವಾಗಿದೆ. ಸಿಸಿ ಕ್ಯಾಮೆರಾ ಅಳವಡಿಕೆಯಿಂದ ಅಪರಾಧಗಳನ್ನು ತಡೆಯುವುದು ಮಾತ್ರವಲ್ಲದೆ, ಒಂದು ವೇಳೆ ಘಟನೆ ನಡೆದರೂ ನೈಜ ಅಪರಾಧಿಗಳನ್ನು ಶೀಘ್ರವಾಗಿ ಪತ್ತೆಹಚ್ಚಲು ಪೊಲೀಸರಿಗೆ ಸಹಕಾರಿಯಾಗುತ್ತದೆ. ಇದು ಸಾರ್ವಜನಿಕರಲ್ಲಿ ಸುರಕ್ಷತಾ ಭಾವನೆಯನ್ನು ಮೂಡಿಸುವುದರ ಜೊತೆಗೆ ಧಾರ್ಮಿಕ ಸೌಹಾರ್ದತೆಯನ್ನು ಕಾಪಾಡಲು ಪೂರಕವಾಗಲಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ. ಈ ಸಂದರ್ಭದಲ್ಲಿ ಟ್ರಸ್ಟಿನ ಪ್ರಮುಖರಾದ ಫೈರೋಝ್ ಆಲ್ದೂರು, ಪ್ರವೀಣ್ ಕೃಷ್ಣಾಪುರ, ಸಾಜೀದ್ ಬಣಕಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Kshetra Samachara
04/04/2026 10:01 am
LOADING...