ತರೀಕೆರೆ: ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಮಕ್ಕಳಿಗೆ ಮೀಸಲಾಗಿದ್ದ ಸುಮಾರು 70 ಚೀಲ ಗೋಧಿಯನ್ನು ಭೂಮಿಯ ಆಳದಲ್ಲಿ ಹೂತುಹಾಕಿರುವ ಪ್ರಕರಣವೊಂದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಬೆಳಕಿಗೆ ಬಂದಿದೆ.
ಸುಮಾರು ಎರಡು ವರ್ಷಗಳ ಹಿಂದೆ ವಸತಿ ಶಾಲೆಯ ಅಂದಿನ ಪ್ರಾಂಶುಪಾಲರಾಗಿದ್ದ ಹರೀಶ್ ಎಂಬುವರ ಅವಧಿಯಲ್ಲಿ ಈ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದ್ದು, ಶಾಲಾ ಆವರಣದ ಹತ್ತು ಅಡಿ ಆಳದ ಗುಂಡಿಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಆಹಾರ ಧಾನ್ಯವನ್ನು ಅಡಗಿಸಿಟ್ಟಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ನಿಯಮದ ಪ್ರಕಾರ ಆಹಾರ ಧಾನ್ಯಗಳು ಬಳಕೆಗೆ ಯೋಗ್ಯವಲ್ಲದಿದ್ದರೆ ಅಥವಾ ಹಾಳಾಗಿದ್ದರೆ ಆಹಾರ ನಿರೀಕ್ಷಕರಿಂದ ದೃಢೀಕರಣ ಪಡೆದು ಸರ್ಕಾರದ ಗಮನಕ್ಕೆ ತರಬೇಕು, ಆದರೆ ಯಾವುದೇ ಮೇಲಾಧಿಕಾರಿಗಳ ಅನುಮತಿ ಪಡೆಯದೆ ರಹಸ್ಯವಾಗಿ ಭೂಮಿಯಲ್ಲಿ ಹೂತಿಟ್ಟಿರುವುದು ಪ್ರಾಂಶುಪಾಲರ ನಡೆಯ ಬಗ್ಗೆ ಸಂಶಯ ಮೂಡಿಸಿದೆ.
ಮಕ್ಕಳಿಗೆ ಚಪಾತಿ ತಯಾರಿಸಿ ನೀಡುವ ಬದಲು ಇಷ್ಟು ದೊಡ್ಡ ಪ್ರಮಾಣದ ಗೋಧಿಯನ್ನು ಶೇಖರಣೆ ಮಾಡಿದ್ದು ಏಕೆ ಮತ್ತು ಅದನ್ನು ಮಾರಾಟ ಮಾಡಲು ಸಾಧ್ಯವಾಗದೆ ಹೂತುಹಾಕಲಾಗಿದೆಯೇ ಎಂಬ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಗೋಧಿ ಹಾಳಾಗಿದೆ ಎಂಬ ಕಾರಣ ನೀಡಿ ಹೂಳಲಾಗಿದೆ ಎಂದು ಹೇಳಲಾಗುತ್ತಿದ್ದರೂ, ಮಕ್ಕಳಿಗೆ ನೀಡುವ ಆಹಾರವನ್ನು ಈ ರೀತಿ ನಾಶಪಡಿಸಿರುವುದು ಗಂಭೀರ ಲೋಪವೆಂದು ಪರಿಗಣಿಸಲಾಗಿದೆ.
ಸ್ಥಳೀಯರ ದೂರಿನ ಮೇರೆಗೆ ಸ್ಥಳದಲ್ಲಿ ಗುಂಡಿ ತೆಗೆಸಿದಾಗ ಈ ಹಗರಣ ಬಟಾಬಯಲಾಗಿದ್ದು, ತನಿಖೆಯ ನಂತರವಷ್ಟೇ ಈ ಅವ್ಯವಹಾರದ ಹಿಂದಿನ ಅಸಲಿ ಸತ್ಯ ಹೊರಬರಬೇಕಿದೆ.
PublicNext
02/04/2026 02:21 pm
LOADING...