ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಸಿಕ್‌ನಲ್ಲಿ ಭೀಕರ ದುರಂತ : ಬಾವಿಗೆ ಬಿದ್ದ ಕಾರು, 9 ಮಂದಿ ಸಾವು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ದಿನ್ಡೋರಿ ತಾಲ್ಲೂಕಿನಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಕಳೆದ ತಡರಾತ್ರಿ ಕಾರೊಂದು ಬಾವಿಗೆ ಉರುಳಿ ಬಿದ್ದ ಪರಿಣಾಮ ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರೆಲ್ಲರೂ ದರ್ಗೋಡೆ ಕುಟುಂಬಕ್ಕೆ ಸೇರಿದವರು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಘಟನೆ ಕುರಿತು ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ಮುಂದುವರಿದಿದ್ದು, ತನಿಖೆಯೂ ನಡೆಯುತ್ತಿದೆ.

ಇನ್ನೂ ಮೃತರ ಪೈಕಿ ಸುನಿಲ್ ದತ್ತು ದರ್ಗೋಡೆ, ರಾಖಿ ಸುನಿಲ್ ದರ್ಗೋಡೆ, ಉಷಾ ಅನಿಲ್ ದರ್ಗೋಡೆ, ಶ್ರದ್ದಾ ಅನಿಲ್ ದರ್ಗೋಡೆ ಮತ್ತು ಶ್ರಾವಣಿ ಅನಿಲ್ ದರ್ಗೋಡೆ ಅವರನ್ನು ಗುರುತಿಸಲಾಗಿದೆ. ಇತರರ ಗುರುತು ಪತ್ತೆ ಕಾರ್ಯ ಮುಂದುವರಿದಿದೆ. ಈ ಕುಟುಂಬ ದಿನ್ಡೋರಿ ತಾಲ್ಲೂಕಿನ ಇಂದೋರ್ ಗ್ರಾಮದ ನಿವಾಸಿಗಳಾಗಿದ್ದರು. ಮಾರೂತಿ XL6 ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ತುಂಬಿದ ಬಾವಿಗೆ ಬಿದ್ದ ಪರಿಣಾಮ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಕುಟುಂಬದ ಸದಸ್ಯರು ಖಾಸಗಿ ಕೋಚಿಂಗ್ ಸೆಂಟರ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಿಂದ ಹಿಂದಿರುಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಚಾಲಕನು ವಾಹನದ ನಿಯಂತ್ರಣ ಕಳೆದುಕೊಂಡಿದ್ದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ರಾತ್ರಿಪೂರ್ತಿ ರಕ್ಷಣಾ ಕಾರ್ಯಗಳು ಮುಂದುವರಿದಿದ್ದು, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (NDRF) ತಂಡವೂ ಸ್ಥಳಕ್ಕೆ ಆಗಮಿಸಿತ್ತು. ಆದರೆ, ಘಟನಾ ಸ್ಥಳದಲ್ಲಿ ಜಮಾಯಿಸಿದ್ದ ಜನಸಮೂಹದಿಂದಾಗಿ ರಕ್ಷಣಾ ಕಾರ್ಯಗಳಿಗೆ ಅಡಚಣೆಯುಂಟಾಯಿತು. ದಿನ್ಡೋರಿ ಪೊಲೀಸರು ಪ್ರಕರಣದ ಕುರಿತು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಕಳೆದ ರಾತ್ರಿ ಸುಮಾರು 10 ಗಂಟೆ ವೇಳೆಗೆ, ದಿನ್ಡೋರಿ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಪ್ರದೀಪ್ ಶಿಂಡೆ ಅವರಿಗೆ, ಶಿವಾಜಿ ನಗರ ಪ್ರದೇಶದ ಅಶು ರಾಜೆ ಅವರಿಗೆ ಸೇರಿದ ಬಾವಿಗೆ ಮಾರೂತಿ XL6 ಕಾರು ಉರುಳಿ ಬಿದ್ದಿರುವ ಬಗ್ಗೆ ಮಾಹಿತಿ ಲಭಿಸಿತು. ಕಾರಿನಲ್ಲಿ ಎಂಟರಿಂದ ಒಂಬತ್ತು ಮಂದಿ ಇದ್ದು, ತಕ್ಷಣದ ಸಹಾಯದ ಅಗತ್ಯವಿದೆ ಎಂದು ತಿಳಿಸಲಾಯಿತು. ಮಾಹಿತಿ ಬಂದ ತಕ್ಷಣವೇ ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದರು.

ರಕ್ಷಣಾ ಕಾರ್ಯಕ್ಕಾಗಿ ಎರಡು ಹೈಡ್ರಾ ಕ್ರೇನ್‌ಗಳು ಮತ್ತು ಪರಿಣತ ಈಜುಗಾರರನ್ನು ಕರೆಸಲಾಯಿತು. ಕ್ರೇನ್‌ಗಳ ಸಹಾಯದಿಂದ ರಾತ್ರಿ ಸುಮಾರು 12:15ರ ವೇಳೆಗೆ ಕಾರನ್ನು ಬಾವಿಯಿಂದ ಹೊರತೆಗೆಯಲಾಯಿತು. ಸ್ಥಳೀಯರ ಸಹಾಯದಿಂದ ವಾಹನ ಮತ್ತು ಮೃತದೇಹಗಳನ್ನು ಬಾವಿಯಿಂದ ಹೊರತೆಗೆದು ದಿನ್ಡೋರಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

04/04/2026 10:46 am

Cinque Terre

22.6 K

Cinque Terre

0

ಸಂಬಂಧಿತ ಸುದ್ದಿ