ಸೂರತ್ : ರಸ್ತೆ ನಿಯಮಗಳನ್ನು ಗಾಳಿಗೆ ತೂರಿ, ಶಾರ್ಟ್‌ಕಟ್ ಹುಡುಕುವ ಭರದಲ್ಲಿ ಅಮೂಲ್ಯ ಜೀವವೊಂದು ಬಲಿಯಾದ ದಾರುಣ ಘಟನೆಯೊಂದು ಸೂರತ್‌ನ ಪರ್ವತ್ ಪಾಟಿಯಾ ಪ್ರದೇಶದಲ್ಲಿ ನಡೆದಿದೆ. ಈ ಭೀಕರ ರಸ್ತೆ ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ. ರಸ್ತೆ ನಿಯಮಗಳನ್ನು ಉಲ್ಲಂಘಿಸಿ, ಅತಿವೇಗವಾಗಿ ರಾಂಗ್ ಸೈಡ್‌ನಲ್ಲಿ ಬಂದ ದ್ವಿಚಕ್ರ ವಾಹನ ಸವಾರನೊಬ್ಬ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ.
ವೈರಲ್ ಆಗಿರುವ ವಿಡಿಯೋದಲ್ಲಿ ಸ್ಪಷ್ಟವಾಗಿ ದಾಖಲಾಗಿರುವಂತೆ, ದ್ವಿಚಕ್ರ ವಾಹನ ಸವಾರನೊಬ್ಬ ಅತಿವೇಗವಾಗಿ ತಪ್ಪು ದಿಕ್ಕಿನಲ್ಲಿ (Wrong Side) ನುಗ್ಗಿ ಬರುತ್ತಾನೆ. ಡಿವೈಡರ್‌ವೊಂದರಿಂದ ಕ್ರಾಸ್ ಮಾಡುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ, ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಅಪಘಾತಕ್ಕೆ ಕಾರಣವಾದ ಸವಾರ ಹೆಲ್ಮೆಟ್ ಧರಿಸಿರಲಿಲ್ಲ ಮತ್ತು ತಪ್ಪು ದಿಕ್ಕಿನಲ್ಲಿ ವೇಗವಾಗಿ ಚಲಿಸುತ್ತಿದ್ದ ಎಂದು ತಿಳಿದುಬಂದಿದೆ. ಕೇವಲ ಕೆಲವು ನಿಮಿಷಗಳನ್ನು ಉಳಿಸುವ ಉದ್ದೇಶದಿಂದ ಇಡೀ ಜೀವನವನ್ನೇ ಕಳೆದುಕೊಂಡ ಈ ಘಟನೆ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. "ರಾಂಗ್ ಸೈಡ್‌ನಲ್ಲಿ ಇಷ್ಟು ವೇಗವಾಗಿ ಬರಬೇಕಿತ್ತಾ?" ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದು, ಸಂಚಾರಿ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಬಗ್ಗೆ ಮತ್ತೊಮ್ಮೆ ವ್ಯಾಪಕ ಚರ್ಚೆ ಶುರುವಾಗಿದೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ಕೈಗೊಂಡಿದ್ದಾರೆ.
PublicNext
03/04/2026 06:33 pm
LOADING...