ಬೆಂಗಳೂರು: ಐಪಿಎಲ್ ಕ್ರಿಕೆಟ್ ಪಂದ್ಯಗಳ ಉಚಿತ ಟಿಕೆಟ್‌ಗಾಗಿ ವಿಧಾನಸಭೆಯಲ್ಲಿ ನಡೆದಿದ್ದ ಚರ್ಚೆ ರಾಜ್ಯಾದ್ಯಂತ ಭಾರೀ ಟೀಕೆಗೆ ಗುರಿಯಾಗಿತ್ತು. ಜನಸಾಮಾನ್ಯರು ಟಿಕೆಟ್‌ಗಾಗಿ ಹಣ ನೀಡಿ ಸಾಲಿನಲ್ಲಿ ನಿಲ್ಲುವಾಗ, ಶಾಸಕರಿಗೆ ಉಚಿತ ಪಾಸ್ ಏಕೆ ಎಂಬ ಪ್ರಶ್ನೆ ಎದ್ದಿತ್ತು. ಈ ಬೆನ್ನಲ್ಲೇ ಕರ್ನಾಟಕದ ಕೆಲವು ಪ್ರಮುಖ ಶಾಸಕರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ "ನಮಗೆ ಉಚಿತ ಟಿಕೆಟ್ ಬೇಡ" ಎಂದು ಸ್ಪೀಕರ್‌ಗೆ ಪತ್ರ ಬರೆದು ಮಾದರಿಯಾಗಿದ್ದಾರೆ.
ಶಾಸಕರಿಗೆ ತಲಾ ಎರಡು ಅಥವಾ ನಾಲ್ಕು ವಿಐಪಿ ಪಾಸ್‌ಗಳನ್ನು ನೀಡುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಈ ನಾಯಕರು ಬಹಿರಂಗವಾಗಿಯೇ ಅಸಮ್ಮತಿ ಸೂಚಿಸಿದ್ದಾರೆ.
ಎಸ್. ಸುರೇಶ್ ಕುಮಾರ್ (ಬಿಜೆಪಿ): ಈ ಅಭಿಯಾನದ ಮುಂಚೂಣಿಯಲ್ಲಿ ನಿಂತವರು ರಾಜಾಜಿನಗರ ಶಾಸಕ ಸುರೇಶ್ ಕುಮಾರ್. ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಪತ್ರ ಬರೆದ ಅವರು, "ಜನರ ಸಮಸ್ಯೆ ಚರ್ಚಿಸಬೇಕಾದ ಸದನದಲ್ಲಿ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿರುವುದು ದುರದೃಷ್ಟಕರ. ನನಗೆ ಯಾವುದೇ ಪಾಸ್ ಅಥವಾ ಟಿಕೆಟ್ ವಿತರಿಸಬೇಡಿ" ಎಂದು ಖಡಾಖಂಡಿತವಾಗಿ ತಿಳಿಸಿದರು.
ರವಿ ಸುಬ್ರಮಣ್ಯ (ಬಿಜೆಪಿ): ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಅವರು ಕೂಡ ವಿಐಪಿ ಸಂಸ್ಕೃತಿಯನ್ನು ವಿರೋಧಿಸಿ ತಮಗೆ ಸಿಗುವ ಉಚಿತ ಟಿಕೆಟ್‌ಗಳನ್ನು ನಿರಾಕರಿಸಿದ್ದಾರೆ. ಇದು ಸಾರ್ವಜನಿಕರಲ್ಲಿ ಶಾಸಕರ ಬಗ್ಗೆ ಇರುವ ಗೌರವವನ್ನು ಹೆಚ್ಚು ಮಾಡಿದೆ.
ಬಸವನಗೌಡ ಪಾಟೀಲ್ ಯತ್ನಾಳ್ (ಬಿಜೆಪಿ): ತಮ್ಮ ನೇರ ಮಾತುಗಳಿಗೆ ಹೆಸರಾದ ಯತ್ನಾಳ್ ಅವರು ಕೂಡ ಈ ವ್ಯವಸ್ಥೆಯನ್ನು ಖಂಡಿಸಿದ್ದಾರೆ. "ರಾಜಕಾರಣಿಗಳಿಗೆ ಉಚಿತ ಸೌಲಭ್ಯಗಳ ಹಪಾಹಪಿ ಸಲ್ಲದು, ಪಂದ್ಯ ನೋಡಬೇಕೆಂದಿದ್ದರೆ ನಾವೇ ಟಿಕೆಟ್ ಕೊಂಡು ನೋಡಬೇಕು" ಎಂಬ ನಿಲುವನ್ನು ಅವರು ವ್ಯಕ್ತಪಡಿಸಿದ್ದಾರೆ.
ಆರ್. ಅಶೋಕ್ (ವಿರೋಧ ಪಕ್ಷದ ನಾಯಕ): ಸದನದಲ್ಲಿ ಟಿಕೆಟ್ ವಿಷಯ ಚರ್ಚೆಗೆ ಬಂದಾಗ ಮೊದಲು ಧ್ವನಿ ಎತ್ತಿದ್ದವರಲ್ಲಿ ಒಬ್ಬರಾದರೂ, ನಂತರ ಉಂಟಾದ ಸಾರ್ವಜನಿಕ ಆಕ್ರೋಶ ಮತ್ತು ನೈತಿಕ ಹೊಣೆಗಾರಿಕೆಯನ್ನು ಗಮನಿಸಿ ಅವರು ಕೂಡ ಉಚಿತ ಟಿಕೆಟ್ ಸೌಲಭ್ಯದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
PublicNext
06/04/2026 07:30 am