ಮೀರತ್: ಸಾಧಾರಣವಾಗಿ ಮಗಳ ಮದುವೆಯೆಂದರೆ ಸಂಭ್ರಮಿಸುವ ಪೋಷಕರನ್ನು ನೋಡಿದ್ದೇವೆ. ಆದರೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಿವೃತ್ತ ನ್ಯಾಯಾಧೀಶರೊಬ್ಬರು ತಮ್ಮ ಮಗಳ ವಿಚ್ಛೇದನವನ್ನು ಹಬ್ಬದಂತೆ ಆಚರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. "ಮಗಳ ಸಂತೋಷಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ" ಎಂಬ ಸಂದೇಶವನ್ನು ಇಡೀ ಸಮಾಜಕ್ಕೆ ಸಾರಿದ್ದಾರೆ.
2018ರಲ್ಲಿ ವಿನೀತಾ ಅವರ ವಿವಾಹ ಮೇಜರ್ ಗೌರವ್ ಅಗ್ನಿಹೋತ್ರಿ ಎಂಬುವವರ ಜೊತೆ ನಡೆದಿತ್ತು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಕಳೆದ ಏಳು-ಎಂಟು ವರ್ಷಗಳಿಂದ ವಿನೀತಾ ಅತೀವ ಕಿರುಕುಳ ಮತ್ತು ಸಂಕಷ್ಟಗಳನ್ನು ಅನುಭವಿಸಿದ್ದರು. ಮಗುವಾದ ಮೇಲಾದರೂ ಪರಿಸ್ಥಿತಿ ಸುಧಾರಿಸಬಹುದು ಎಂಬ ನಿರೀಕ್ಷೆ ಹುಸಿಯಾಗಿತ್ತು.
ದೀರ್ಘಕಾಲದ ಕಾನೂನು ಹೋರಾಟದ ನಂತರ ಮೀರತ್ ನ್ಯಾಯಾಲಯವು ವಿಚ್ಛೇದನದ ತೀರ್ಪು ಪ್ರಕಟಿಸುತ್ತಿದ್ದಂತೆ, ವಿನೀತಾ ಅವರ ತಂದೆ ಮತ್ತು ಕುಟುಂಬಸ್ಥರು ನ್ಯಾಯಾಲಯದ ಆವರಣದಲ್ಲೇ ಡೋಲು ಬಾರಿಸಿ, ನೃತ್ಯ ಮಾಡಿ, ಸಿಹಿ ಹಂಚಿ ಸಂಭ್ರಮಿಸಿದರು. ನನ್ನ ಮಗಳಿಗೆ ನ್ಯಾಯ ಸಿಕ್ಕಿದೆ. ಅವಳು ಮತ್ತೆ ಸ್ವತಂತ್ರಳಾಗಿದ್ದಾಳೆ. ಇದಕ್ಕಿಂತ ದೊಡ್ಡ ಸಂತೋಷ ನಮಗೆ ಬೇರೊಂದಿಲ್ಲ ಎಂದು ವಿನೀತಾ ಅವರ ತಂದೆ ಹರ್ಷ ವ್ಯಕ್ತಪಡಿಸಿದ್ದಾರೆ.
ತಮ್ಮ ಮಗಳ ಪರವಾಗಿ ಗಟ್ಟಿಯಾಗಿ ನಿಂತ ನಿವೃತ್ತ ನ್ಯಾಯಾಧೀಶರು ಮಾಧ್ಯಮಗಳ ಮುಂದೆ ಹೇಳಿದ ಮಾತುಗಳು ಈಗ ವೈರಲ್ ಆಗಿವೆ: "ನಾನು ಯಾವುದೇ ಪರಿಹಾರ ಧನ ಪಡೆದಿಲ್ಲ. ನನಗೆ ಬೇಕಿರುವುದು ನನ್ನ ಮಗಳು ಮಾತ್ರ. ಅವಳೇ ನನ್ನ ಸರ್ವಸ್ವ. ಮದುವೆಯ ನಂತರ ಮಗಳು ಸುಖವಾಗಿಲ್ಲ ಎಂದರೆ, ಅವಳನ್ನು ಮತ್ತೆ ಮನೆಗೆ ಕರೆತಂದು ಸಂತೋಷವಾಗಿಡುವುದು ತಂದೆಯಾಗಿ ನನ್ನ ಕರ್ತವ್ಯ ಎಂದಿದ್ದಾರೆ.
PublicNext
06/04/2026 01:43 pm