ನವದೆಹಲಿ: ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಸದ್ಯ ಐಪಿಎಲ್ 2026ರಲ್ಲಿ ತಮ್ಮ ಸರಳತೆಯಿಂದಲೇ ಸುದ್ದಿಯಲ್ಲಿದ್ದಾರೆ. ಸ್ಟಾರ್ ಕ್ರಿಕೆಟಿಗನ ಪುತ್ರನಾಗಿದ್ದರೂ ಯಾವುದೇ ಅಹಂ ಇಲ್ಲದೆ ತಂಡದ ಸಹ ಆಟಗಾರರಿಗೆ ಮೈದಾನದಲ್ಲಿ ನೀರು ಸರಬರಾಜು ಮಾಡುತ್ತಿರುವ (Water Boy) ಅವರ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಈ ಬಾರಿಯ ಐಪಿಎಲ್ ಹರಾಜಿನ ಮುನ್ನ ಮುಂಬೈ ಇಂಡಿಯನ್ಸ್ ತಂಡದಿಂದ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡಕ್ಕೆ ಅರ್ಜುನ್ ತೆಂಡೂಲ್ಕರ್ ವರ್ಗಾವಣೆಗೊಂಡಿದ್ದರು. ಗೋವಾ ಪರ ದೇಶೀಯ ಕ್ರಿಕೆಟ್ ಆಡುವ 26 ವರ್ಷದ ಈ ಎಡಗೈ ವೇಗಿ ಮತ್ತು ಬ್ಯಾಟರ್, ಲಕ್ನೋ ತಂಡದಲ್ಲಿ ಸ್ಥಾನ ಪಡೆದಿದ್ದರೂ ಸದ್ಯ ಆಡುವ 11ರ ಬಳಗದಲ್ಲಿ (Playing XI) ಅವಕಾಶ ಪಡೆದಿಲ್ಲ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಪೋಸ್ಟ್ ಒಂದರಲ್ಲಿ, ಅರ್ಜುನ್ ಅವರು ಐಷಾರಾಮಿ ಜೀವನವನ್ನು ಆಯ್ಕೆ ಮಾಡಿಕೊಳ್ಳುವ ಬದಲು ಶ್ರಮದ ಹಾದಿ ಹಿಡಿದಿದ್ದಾರೆ ಎಂದು ಶ್ಲಾಘಿಸಲಾಗಿದೆ. ತಂಡದಲ್ಲಿ ಸ್ಥಾನ ಸಿಗದಿದ್ದರೂ ಬೇಸರ ಮಾಡಿಕೊಳ್ಳದೆ, ಡ್ರೆಸ್ಸಿಂಗ್ ರೂಮ್ ಸಂಸ್ಕೃತಿಯನ್ನು ಗೌರವಿಸಿ ಮೈದಾನಕ್ಕೆ ಓಡಿ ಬಂದು ಸಹ ಆಟಗಾರರಿಗೆ ನೀರು ಮತ್ತು ಬ್ಯಾಟ್ ನೀಡಿ ಬೆಂಬಲಿಸುತ್ತಿರುವುದು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.
ಅರ್ಜುನ್ ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿರುವುದರ ನಡುವೆಯೇ, ಕೆಲವು ನೆಟ್ಟಿಗರು ಇದು ಸಾಮಾನ್ಯ ಪ್ರಕ್ರಿಯೆ ಎಂದು ಅಭಿಪ್ರಾಯಪಟ್ಟಿದ್ದಾರೆ. "ಕ್ರಿಕೆಟ್‌ನಲ್ಲಿ ಆಡುವ 11ರ ಬಳಗದಲ್ಲಿ ಇಲ್ಲದ ಪ್ರತಿಯೊಬ್ಬ ಆಟಗಾರನೂ ಈ ಕೆಲಸವನ್ನು ಮಾಡಲೇಬೇಕು. ಇದು ತಂಡದ ಶಿಸ್ತಿನ ಭಾಗವೇ ಹೊರತು ಇದರಲ್ಲಿ ವಿಶೇಷವೇನಿಲ್ಲ" ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
PublicNext
06/04/2026 05:42 pm