ಕೋಟ: ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಪ್ರೆಸಿಡೆಂಟ್ ಕನ್ವೆನ್ಷನ್ ಹಾಲ್ ಮುಂಭಾಗ ಸಂಭವಿಸಿದೆ.ಕೋಟೇಶ್ವರ ಗಾಂಧಿ ನಗರದ ನಿವಾಸಿ, ದಿವಂಗತ ಉಂಙಾಕ ಅವರ ಪತ್ನಿ ಅಲಿಮಾಬಿ (62) ಮೃತಪಟ್ಟ ದುರ್ದೈವಿ.
ಘಟನೆಯ ವಿವರ:
ಸೋಮವಾರ ರಾತ್ರಿ ತೆಕ್ಕಟ್ಟೆಯ ಪ್ರೆಸಿಡೆಂಟ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಲಾಗಿದ್ದ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಅಲಿಮಾಬಿ ಪಾಲ್ಗೊಂಡಿದ್ದರು. ಸಮಾರಂಭ ಮುಗಿಸಿ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಮನೆಗೆ ಮರಳಲು ಇತರ ಮೂವರು ಮಹಿಳೆಯರೊಂದಿಗೆ ರಸ್ತೆ ದಾಟುತ್ತಿದ್ದರು. ಈ ಸಂದರ್ಭದಲ್ಲಿ ಮಂಗಳೂರಿನಿಂದ ಬಾದಾಮಿ-ಐಹೊಳೆ ಕಡೆಗೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್, ಅತಿ ವೇಗ ಮತ್ತು ಅಜಾಗರೂಕತೆಯಿಂದ ಬಂದು ಮಹಿಳೆಗೆ ನೇರವಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದ ತೀವ್ರತೆಗೆ ತಲೆ ಹಾಗೂ ದೇಹಕ್ಕೆ ಗಂಭೀರ ಗಾಯಗಳಾಗಿದ್ದು, ಅಲಿಮಾಬಿ ಅವರು ಘಟನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕೂಡಲೇ ಸ್ಥಳೀಯರು ಹಾಗೂ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಅತಂತ್ರರಾದ ಬುದ್ಧಿಮಾಂದ್ಯ ಮಕ್ಕಳು:
ಮೃತ ಅಲಿಮಾಬಿ ಅವರಿಗೆ ನಾಲ್ವರು ಗಂಡು ಹಾಗೂ ಓರ್ವ ಪುತ್ರಿ ಇದ್ದಾರೆ. ಇವರಲ್ಲಿ ಒಂದು ಹೆಣ್ಣು ಹಾಗೂ ಓರ್ವ ಗಂಡು ಮಕ್ಕಳು ಬುದ್ಧಿಮಾಂದ್ಯರಾಗಿದ್ದು, ಅಲಿಮಾಬಿ ಅವರೇ ಈ ಇಬ್ಬರು ಮಕ್ಕಳ ಪೋಷಣೆ ಮಾಡುತ್ತಿದ್ದರು. ಹಗಲಿರುಳು ಈ ಮಕ್ಕಳ ಹಾರೈಕೆಯಲ್ಲೇ ತೊಡಗಿದ್ದ ತಾಯಿಯ ಅಗಲಿಕೆಯಿಂದಾಗಿ, ಈಗ ಆ ಅಸಹಾಯಕ ಮಕ್ಕಳು ಸಂಪೂರ್ಣ ಅನಾಥರಾಗಿದ್ದು, ಅವರ ಭವಿಷ್ಯ ಅತಂತ್ರವಾಗಿದೆ. ಈ ಘಟನೆಯು ಸ್ಥಳೀಯರಲ್ಲಿ ತೀವ್ರ ಮರುಕ ಉಂಟುಮಾಡಿದೆ.
ಘಟನಾ ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.
PublicNext
07/04/2026 02:20 pm