ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ : ಒಂದೇ ಸೂರಿನಡಿ ಸೇವೆ : ಸರ್ಕಾರಿ ಆಸ್ಪತ್ರೆಗೆ ಹೊಸ ರೂಪ - ಆದ್ರೆ ಕಣ್ಣಿನ ತಜ್ಞರ ಹುದ್ದೆ ಖಾಲಿ

ಚಳ್ಳಕೆರೆ : ನಗರದ ಸಾರ್ವಜನಿಕ ಆಸ್ಪತ್ರೆ ಕೆಲ ತಿಂಗಳ ಹಿಂದೆ ವೈದ್ಯರ ಕೊರತೆಯಿಂದ ಸಂಕಷ್ಟದಲ್ಲಿದ್ದರೂ, ಆಡಳಿತ ವೈದ್ಯಾಧಿಕಾರಿಯಾಗಿ ನೇಮಕವಾದ ಡಾ. ಪಂಕಜ ಮುಂದಾಳತ್ವದಲ್ಲಿ ಮಹತ್ತರ ಬದಲಾವಣೆ ಕಂಡಿದೆ. ಬಡವರ ಸಂಜೀವಿನಿಯಂತಿರುವ ಈ ಆಸ್ಪತ್ರೆಯಲ್ಲಿ ಇದೀಗ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿದ್ದು, ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಹೆರಿಗೆ ಸೇವೆಗಳು, ಗರ್ಭಕೋಶ ಶಸ್ತ್ರಚಿಕಿತ್ಸೆಗಳು ಸೇರಿದಂತೆ ಹಲವು ಪ್ರಮುಖ ಚಿಕಿತ್ಸೆಗಳು ಲಭ್ಯವಾಗಿದ್ದು, ಗ್ರಾಮೀಣ ಭಾಗದ ರೋಗಿಗಳಿಗೆ ದೊಡ್ಡ ಅನುಕೂಲವಾಗಿದೆ.

ಮಕ್ಕಳ ಆಸ್ಪತ್ರೆಯಲ್ಲಿ ಒಂದೇ ಸೂರಿನಡಿ ಓಪಿಡಿ ಚೀಟಿ ಮತ್ತು ಔಷಧಿ ವಿತರಣೆ ವ್ಯವಸ್ಥೆ ಪ್ರಾರಂಭಿಸಿರುವುದು ವಿಶೇಷವಾಗಿದೆ. ಹಿಂದೆ ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳು ಚೀಟಿ ಪಡೆಯಲು ದೂರ ತೆರಳಬೇಕಾಗಿದ್ದರೆ, ಇದೀಗ ಅದೇ ಸ್ಥಳದಲ್ಲಿ ಸೇವೆ ದೊರೆಯುತ್ತಿದೆ. ಜೊತೆಗೆ ವಯೋವೃದ್ಧರಿಗೆ ಕೆಳಮಹಡಿಯಲ್ಲಿ ಆನ್‌ಲೈನ್ ಚೀಟಿ ವ್ಯವಸ್ಥೆ ಕಲ್ಪಿಸಲಾಗಿದೆ. ಆಸ್ಪತ್ರೆಯಲ್ಲಿ ವಿವಿಧ ವಿಭಾಗಗಳಲ್ಲಿ ಒಟ್ಟು 14 ಮಂದಿ ವೈದ್ಯರು ಸೇವೆ ಸಲ್ಲಿಸುತ್ತಿದ್ದು, ತುರ್ತು ಚಿಕಿತ್ಸೆಯಿಂದ ಹಿಡಿದು ಕಿವಿ-ಮೂಗು-ಗಂಟಲು, ದಂತ ಹಾಗೂ ಹೆರಿಗೆ ವಿಭಾಗಗಳ ಸೇವೆಗಳು ಸುಧಾರಣೆ ಕಂಡಿವೆ.

ಲ್ಯಾಬ್ ಸೇವೆಗಳ ವಿಸ್ತರಣೆಯಿಂದಾಗಿ ಬಹುತೇಕ ಪರೀಕ್ಷೆಗಳು ಆಸ್ಪತ್ರೆಯಲ್ಲೇ ನಡೆಯುತ್ತಿದ್ದು, ರೋಗಿಗಳಿಗೆ ಹೆಚ್ಚಿನ ಸೌಲಭ್ಯ ಒದಗಿದೆ. ಆದರೆ ಆಧುನಿಕ ಸ್ಕ್ಯಾನಿಂಗ್ ಯಂತ್ರದ ಕೊರತೆ ಇನ್ನೂ ಕಾಡುತ್ತಿದ್ದು, ಸಮಗ್ರ ತಪಾಸಣೆಗಾಗಿ ಹೊಸ ಯಂತ್ರದ ಅಗತ್ಯವಿದೆ. ಮೂಲಭೂತ ಸೌಕರ್ಯಗಳ ಮೇಲೂ ಗಮನ ಹರಿಸಲಾಗಿದ್ದು, ಕುಡಿಯುವ ನೀರು, ಆಸನ ವ್ಯವಸ್ಥೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಖಾಲಿ ಇರುವ ಕಣ್ಣಿನ ತಜ್ಞರ ಹುದ್ದೆ ಭರ್ತಿಯಾಗಿದರೆ ಸೇವೆ ಇನ್ನಷ್ಟು ಬಲಪಡಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Edited By :
PublicNext

PublicNext

17/04/2026 09:59 pm

Cinque Terre

19.33 K

Cinque Terre

0

ಸಂಬಂಧಿತ ಸುದ್ದಿ