ಚಿತ್ರದುರ್ಗ: ಪೊಲೀಸ್ ಸಿಬ್ಬಂದಿಯನ್ನು ಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷೆ ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಚಿಕ್ಕಜಾಜೂರು ಪೊಲೀಸ್ ಠಾಣೆಯ ಪಿಎಸ್‌ಐ ನೇತ್ರಾವತಿ ಅವರನ್ನು ವರ್ಗಾವಣೆ ಮಾಡಲಾಗಿದೆ.
ಪೂರ್ವವಲಯ ಐಜಿಪಿ ರವಿಕಾಂತೇಗೌಡ ಅವರು ಈ ಕುರಿತು ಆದೇಶ ಹೊರಡಿಸಿದ್ದು, ನೇತ್ರಾವತಿ ಅವರನ್ನು ಭರಮಸಾಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಇನ್ನು ಚಿಕ್ಕಜಾಜೂರು ಪಿಎಸ್‌ಐ ಆಗಿ ಗಾದಿಲಿಂಗಪ್ಪ ಅವರನ್ನು ನೇಮಕ ಮಾಡಲಾಗಿದೆ.
ಪಿಎಸ್‌ಐ ನೇತ್ರಾವತಿ ಅವರು 14 ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಬಿಸಿಲಿನಲ್ಲಿ ನಿಲ್ಲಿಸಿ ದರ್ಪದಿಂದ ಶಿಕ್ಷೆ ನೀಡಿದ್ದ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ದರ್ಪದ ಕುರಿತು 'ಪಬ್ಲಿಕ್ ನೆಕ್ಸ್ಟ್' ಸುದ್ದಿ ಸಂಸ್ಥೆ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಸುದ್ದಿ ಪ್ರಸಾರವಾದ ಮರುದಿನವೇ ನೇತ್ರಾವತಿ ಅವರನ್ನು OOD (On Other Duty) ಮೇಲೆ ತಾತ್ಕಾಲಿಕವಾಗಿ ವರ್ಗಾವಣೆ ಮಾಡಲಾಗಿತ್ತು.
ತಾತ್ಕಾಲಿಕ ವರ್ಗಾವಣೆಯ ನಂತರ ಇದೀಗ ಕಾಯಂ ವರ್ಗಾವಣೆ ಮಾಡುವ ಮೂಲಕ ಅವರಿಗೆ ಸೂಕ್ತ ಪಾಠ ಕಲಿಸಿದಂತಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಈ ಪ್ರಕರಣವು ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ನಡೆದುಕೊಳ್ಳಬೇಕಾದ ರೀತಿಯ ಕುರಿತು ಮತ್ತೊಮ್ಮೆ ಚರ್ಚೆಗೆ ಗ್ರಾಸ ಒದಗಿಸಿದೆ.
PublicNext
30/04/2026 10:25 am
LOADING...