ಸಿದ್ದಾಪುರ: ತಾಲೂಕಿನ ಬಿಕ್ಕಳಸೆ ಗ್ರಾಮದ ಯುವತಿ ಮಲ್ಲಿಕಾ ಅಣ್ಣಪ್ಪ ಮಡಿವಾಳ ಅವರ ಆತ್ಮಹತ್ಯೆ ಪ್ರಕರಣ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
"ಇದು ಸ್ಪಷ್ಟವಾಗಿ ಲವ್ ಜಿಹಾದ್ ಪ್ರಕರಣವಾಗಿದ್ದು, ಮೋಸದ ಪ್ರೀತಿಯ ಜಾಲಕ್ಕೆ ಸಿಲುಕಿ ನಮ್ಮ ಭಾಗದ ಹೆಣ್ಣುಮಗಳು ಬಲಿಯಾಗಿದ್ದಾಳೆ. ಆಕೆಯ ಸಾವಿಗೆ ಕಾರಣರಾದ ಆರೋಪಿಯನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿ ಸಿದ್ದಾಪುರ ಬಿಜೆಪಿ ಮಂಡಲದ ವತಿಯಿಂದ ಪೊಲೀಸ್ ಠಾಣೆ ಎದುರು ಸಾಂಕೇತಿಕ ಧರಣಿ ನಡೆಸಲಾಯಿತು.
ಮಂಡಲ ಅಧ್ಯಕ್ಷ ತಿಮ್ಮಪ್ಪ ಮಡಿವಾಳ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಪ್ರಕರಣದ ಸೂಕ್ತ ತನಿಖೆ ಹಾಗೂ ಆರೋಪಿತರಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಸಿರ್ಸಿ ಡಿಎಸ್‌ಪಿ ಅವರಿಗೆ, ಪೊಲೀಸ್ ಇನ್‌ಸ್ಪೆಕ್ಟರ್ ಜೆ. ಬಿ. ಸೀತಾರಾಮ್ ಮೂಲಕ ಮನವಿ ಸಲ್ಲಿಸಲಾಯಿತು.
ತನಿಖೆ ಬಗ್ಗೆ ಅವಿಶ್ವಾಸ, ಬಿಜೆಪಿ ಎಚ್ಚರಿಕೆ
ಈ ಪ್ರಕರಣವನ್ನು ಮುಚ್ಚಿಹಾಕಲು ತಹಶೀಲ್ದಾರ್‌ನಿಂದ ಸಿಪಿಐ ವರೆಗೆ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಬಿಜೆಪಿ ಸಿದ್ದಾಪುರ ಮಂಡಲ ಅಧ್ಯಕ್ಷ ಎಂ. ಕೆ. ತಿಮ್ಮಪ್ಪ ಆರೋಪಿಸಿದರು. ಪ್ರಸ್ತುತ ಸಿಪಿಐ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿಲ್ಲ. ಹೀಗಾಗಿ, ಈ ಪ್ರಕರಣದ ತನಿಖೆಗಾಗಿ ಬೇರೆ ತಂಡವನ್ನು ರಚಿಸಬೇಕು. 15 ದಿನಗಳೊಳಗೆ ಸೂಕ್ತ ತನಿಖೆ ನಡೆಯದಿದ್ದರೆ, ಸಿದ್ದಾಪುರ ಬಂದ್‌ಗೆ ಕರೆ ನೀಡಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಸರ್ಕಾರದ ವಿರುದ್ಧ ಆರ್.ಡಿ. ಹೆಗಡೆ ಕಿಡಿ
ಶಿವಮೊಗ್ಗದ ಆರ್. ಡಿ. ಹೆಗಡೆ ಜಾನ್ಮನೆ ಮಾತನಾಡಿ, "ಪ್ರಸ್ತುತ ಸರ್ಕಾರ ಹಾಗೂ ಸ್ಥಳೀಯ ಶಾಸಕರು ಜನರ ನೆಮ್ಮದಿಯನ್ನು ಕಸಿದು ತಾವು ನೆಮ್ಮದಿಯಾಗಿ ಬದುಕುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯ ಸರ್ಕಾರದ ವ್ಯವಸ್ಥಿತ ಆದೇಶದಂತೆ ಹಿಂದುಗಳ ಮೇಲೆ ಹಲ್ಲೆಗಳು ಮತ್ತು ದೊಂಬಿಗಳು ನಡೆಯುತ್ತಿವೆ" ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಮೂರು ವರ್ಷಗಳಲ್ಲಿ ಆತ್ಮಹತ್ಯೆಗಳು ಮತ್ತು ಕೊಲೆಗಳು ನಿರಂತರವಾಗಿ ನಡೆಯುತ್ತಿದ್ದರೂ, ಕಂದಾಯ ಇಲಾಖೆಯಿಂದಾಗಲಿ, ಪೊಲೀಸ್ ಇಲಾಖೆಯಿಂದಾಗಲಿ 'ನಾವು ನಿಮ್ಮೊಂದಿಗೆ ಇದ್ದೇವೆ' ಎಂಬ ಸಂದೇಶ ಈವರೆಗೂ ಸಾರ್ವಜನಿಕರಿಗೆ ತಲುಪಿಲ್ಲ. ಸಮಾಜಘಾತುಕರಿಗೆ ಶಿಕ್ಷೆಯಾಗದಿದ್ದಲ್ಲಿ ಮತ್ತು ಜನಪ್ರತಿನಿಧಿಗಳು ಹಾಗೂ ಇಲಾಖೆಗಳು ಅವರನ್ನು ರಕ್ಷಿಸುವಲ್ಲಿ ನಿರತವಾಗಿದ್ದಲ್ಲಿ, ಇಂತಹ ಗಲಾಟೆಗಳು ಮತ್ತು ದೊಂಬಿಗಳು ನಿಲ್ಲುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ತನಿಖಾ ತಂಡದ ಮೇಲೆ ಭರವಸೆ ಇಲ್ಲ: ತೋಟಪ್ಪ ನಾಯ್ಕ್
ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ತೋಟಪ್ಪ ನಾಯ್ಕ್ ಮಾತನಾಡಿ, ಇಲ್ಲಿಯ ಪೊಲೀಸ್ ಇಲಾಖೆ, ಸ್ಥಳೀಯ ಶಾಸಕರು ಹಾಗೂ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಆರೋಪಿತರ ಪರವಾಗಿ ವರ್ತಿಸುತ್ತಿವೆ. ನಮಗೆ ಪ್ರಸ್ತುತ ತನಿಖಾ ತಂಡದ ಮೇಲೆ ಯಾವುದೇ ಭರವಸೆ ಇಲ್ಲ. ಮೃತಳಿಗೆ ನ್ಯಾಯ ಒದಗಿಸಲು ಸೂಕ್ತ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
PublicNext
20/04/2026 06:14 pm