ಸಿದ್ದಾಪುರ: ಕಳೆದ ನಾಲ್ಕು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮನೆಕಳ್ಳತನ ಪ್ರಕರಣದ ಆರೋಪಿಯೊಬ್ಬನನ್ನು ಸಿದ್ದಾಪುರ ಪೊಲೀಸರು ಉಡುಪಿ ಜಿಲ್ಲೆಯ ತ್ರಾಸಿಯಲ್ಲಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ 4 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಕಣ್ತಪ್ಪಿಸಿಕೊಂಡಿದ್ದ, ಮನೆಕಳ್ಳತನ ಪ್ರಕರಣದ ಆರೋಪಿತ ಫಾರುಖ್ ಯಾನೆ ಫಾರುಖ್ ಉಲ್ಲಾ (24) ಎಂಬಾತನನ್ನು ಉಡುಪಿ ಜಿಲ್ಲೆಯ ತ್ರಾಸಿಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದಾಗ ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ.
ಶಿವಮೊಗ್ಗ ಜಿಲ್ಲೆಯ ಶಿರಳಕೊಪ್ಪದ ಹಳ್ಳೂರಕೇರಿ ನಿವಾಸಿ ಫಾರುಖ್ ಯಾನೆ ಫಾರುಖ್ ಉಲ್ಲಾ ತಂದೆ ಬೋಗಿ ಬಾಷಾಸಾಬ್ ಎಂಬಾತನ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 03/2017 u/s 457, 380 IPC ಕಾಯಿದೆಯಡಿಯಲ್ಲಿ ಮನೆಕಳ್ಳತನ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಸಿದ್ದಾಪುರ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಆರೋಪಿ ತಲೆಮರೆಸಿಕೊಂಡಿದ್ದರಿಂದ, ಸಿದ್ದಾಪುರ ನ್ಯಾಯಾಲಯವು ಆತನ ವಿರುದ್ಧ ದಸ್ತಗಿರಿ ವಾರಂಟ್ ಹೊರಡಿಸಿತ್ತು.
ಆರೋಪಿಯ ಪತ್ತೆಗಾಗಿ ಸಿದ್ದಾಪುರ ಪೊಲೀಸರು ಶಿವಮೊಗ್ಗ, ಹಾವೇರಿ, ಮಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಮಾಹಿತಿ ಸಂಗ್ರಹಿಸಿ ತೀವ್ರ ಶೋಧ ನಡೆಸಿದ್ದರು. ಕೊನೆಗೆ, ಉಡುಪಿ ಜಿಲ್ಲೆಯ ತ್ರಾಸಿ ಎಂಬಲ್ಲಿ ವೇಷ ಬದಲಾಯಿಸಿಕೊಂಡು ಭಿಕ್ಷಾಟನೆಯಲ್ಲಿ ತೊಡಗಿದ್ದ ಆರೋಪಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ದಿನಾಂಕ 20-05-2026 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅಲ್ಲದೆ, ಈ ಆರೋಪಿಯ ವಿರುದ್ಧ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಹಲವಾರು ಪೊಲೀಸ್ ಠಾಣೆಗಳಲ್ಲಿ ಕೂಡ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ದೀಪನ್ ಎಂ.ಎನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ. ಕೃಷ್ಣಮೂರ್ತಿ, ಶಿರಸಿ ಉಪವಿಭಾಗದ ಡಿವೈಎಸ್‌ಪಿ ಗೀತಾ ಪಾಟೀಲ್ ಹಾಗೂ ಪೊಲೀಸ್ ನಿರೀಕ್ಷಕ ಸೀತಾರಾಮ ಜೆ.ಬಿ. ರವರ ಮಾರ್ಗದರ್ಶನದಲ್ಲಿ ಸಿದ್ದಾಪುರ ಠಾಣೆಯ ತನಿಖಾ ವಿಭಾಗದ ಪಿಎಸ್‌ಐ ನಾಗಪ್ಪ ಬಿ. ನೇತೃತ್ವದಲ್ಲಿ ಸಿಬ್ಬಂದಿಗಳಾದ ಚೇತನಕುಮಾರ ಹಲಗೇರಿ, ಭರತಕುಮಾರ ಕೆ.ಜೆ. ಮತ್ತು ಶಶಿಕಾಂತ ನಾಯ್ಕ್ ಅವರು ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Kshetra Samachara
28/04/2026 05:14 pm