ಭಟ್ಕಳ: ಕೇಂದ್ರ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಐ.ಎ.ಎಸ್ ಅಧಿಕಾರಿ ತೇಜಸ್ವಿ ನಾಯ್ಕ ಅವರಿಗೆ ಮಹತ್ವದ ಪದೋನ್ನತಿ ಲಭಿಸಿದೆ. ಅವರನ್ನು ಕೇಂದ್ರ ಕಾರ್ಮಿಕ ಮತ್ತು ಸಬಲೀಕರಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಹುದ್ದೆಗೆ ಪದೋನ್ನತಿಗೊಳಿಸಲಾಗಿದೆ.
ಹಿನ್ನೆಲೆ ಮತ್ತು ಅನುಭವ
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಮೂಲದವರಾದ ತೇಜಸ್ವಿ ನಾಯ್ಕ, ಪ್ರಸ್ತುತ ಶಿರಸಿಯಲ್ಲಿ ನೆಲೆಸಿದ್ದಾರೆ. ಇವರು 2009ರ ಮಧ್ಯಪ್ರದೇಶ ಕೆಡರ್‌ನ ಐಎಎಸ್ ಅಧಿಕಾರಿಯಾಗಿದ್ದು, ಮಧ್ಯಪ್ರದೇಶದಲ್ಲಿ ದಕ್ಷ ಹಾಗೂ ಕಟ್ಟುನಿಟ್ಟಿನ ಅಧಿಕಾರಿಯೆಂದೇ ಹೆಸರುವಾಸಿಯಾಗಿದ್ದರು. ಮಧ್ಯಪ್ರದೇಶದಲ್ಲಿ ಇವರು ಪರಿಣಾಮಕಾರಿಯಾಗಿ ಜಾರಿಗೆ ತಂದ 'ಜಲ ಮಿಷನ್' ಯೋಜನೆಗೆ ಅಂತರಾಷ್ಟ್ರೀಯ ಮನ್ನಣೆ ದೊರೆತಿರುವುದು ಅವರ ಕಾರ್ಯದಕ್ಷತೆಗೆ ಪ್ರಮುಖ ನಿದರ್ಶನವಾಗಿದೆ. ಈ ಹಿಂದೆ ಕೇಂದ್ರ ಕೃಷಿ ಸಚಿವ ಅರ್ಜುನ ಮುಂಡಾ ಅವರ ಆಪ್ತ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದ ಇವರ ಅನುಭವವನ್ನು ಪರಿಗಣಿಸಿ ಕೇಂದ್ರ ಸರ್ಕಾರ ಈ ಉನ್ನತ ಹುದ್ದೆಗೆ ಪದೋನ್ನತಿ ನೀಡಿದೆ.
ಕುಟುಂಬದ ವಿವರ
ತೇಜಸ್ವಿ ನಾಯ್ಕ ಅವರ ಪತ್ನಿ ಸ್ವಾತಿಮೀನಾ ನಾಯ್ಕ ಕೂಡ ಐಎಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Kshetra Samachara
20/04/2026 08:35 pm
LOADING...