ಮಂಗಳೂರು: ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಂಡಿದ್ದೇ ಮಾನಸಿಕ ಅಸ್ವಸ್ಥನಿಗೆ ಮನೆಯತ್ತ ತೋರಿತು ಹಾದಿ
ಮಂಗಳೂರು: ಆತ ಸದಾ ಮೌನಿ. ಯಾರಲ್ಲೂ ಮಾತನಾಡುವುದಿಲ್ಲ, ಬೆರೆಯುವುದಿಲ್ಲ, ನಗುವಿಲ್ಲ, ಭಾವನೆಯಿಲ್ಲ. ಮಾನಸಿಕ ಅಸ್ವಸ್ಥನಾದ ಈತ ಎ.20ರಂದು ತಾನಿರುವ ಪುನರ್ವಸತಿ ಕೇಂದ್ರದಿಂದ ಏಕಾಏಕಿ ತಪ್ಪಿಸಿಕೊಂಡ. ಇದೇ ಆತ ಮತ್ತೆ ಕುಟುಂಬ ಸೇರಲು ಕಾರಣವಾಯ್ತು ಎಂಬ ಇಂಟ್ರೆಸ್ಟಿಂಗ್ ಸ್ಟೋರಿಯನ್ನು ನಾವೀಗ ಹೇಳಲು ಹೊರಟಿದ್ದೇವೆ.
ಮಂಗಳೂರಿನ ಮರೋಳಿಯ ವೈಟ್‌ಡೌಸ್ ಸಂಸ್ಥೆ ಮಾನಸಿಕ ಅಸ್ವಸ್ಥರು, ನಿರ್ಗತಿಕರ ಪಾಲಿಗೆ ಆಶ್ರಯಧಾಮ. ವೈಟ್‌ಡೌಸ್ ಸಂಸ್ಥೆಯ ಸಂಸ್ಥಾಪಕಿ ಕೊರಿನ್ ರಸ್ಕಿನಾ 2024ರ ಡಿಸೆಂಬರ್‌ನಲ್ಲಿ ಬೀದಿಬದಿ ಊಟಲು ಕೊಡಲು ಹೋದಾಗ ಈತ ಕಾಣಲು ಸಿಕ್ಕಿದ್ದ. ಅಂದು ಅವರೊಂದಿಗೆ ಬರಲೊಪ್ಪದೆ ಈತ ಓಡಿಹೋಗಿದ್ದ. 2026 ಫೆ.26ರಲ್ಲಿ ಕೊರಿನ್ ರಸ್ಕಿನಾರಿಗೆ ಈತ ನಿರ್ಗತಿಕನಂತೆ ಇರುವ ಬಗ್ಗೆ ಯಾರೋ ಸಾರ್ವಜನಿಕರು ಕರೆ ಮಾಡಿ ತಿಳಿಸಿದ್ದರು. ಅದರಂತೆ ಅವರು ಫೋರಂ ಮಾಲ್ ಕಡೆಯಿಂದ ಆತನನ್ನು ವೈಟ್‌ಡೌಸ್ ಪುನರ್ವಸತಿ ಕೇಂದ್ರಕ್ಕೆ ಕರೆತಂದು ಶುಶ್ರೂಷೆ ಮಾಡಿದ್ದರು
ಬಳಿಕ ಆತನಿಗೆ ಚಿಕಿತ್ಸೆ ಆರಂಭಗೊಂಡಿತು. ಆದರೆ ಯಾರೊಂದಿಗೂ ಮಾತನಾಡದೆ ಇರುವ ಈತ ಅಲ್ಲಿಂದ ತಪ್ಪಿಸಿಕೊಂಡು ಓಡಲು ಯತ್ನಿಸುತ್ತಿದ್ದ. ಎ.20ರಂದು ಹೇಗೋ ಆತ ತಪ್ಪಿಸಿಕೊಂಡು ಓಡಿದ್ದಾನೆ. ತಕ್ಷಣ ವೈಟ್‌ಡೌಸ್ ಸಿಬ್ಬಂದಿ ಆತನನ್ನು ಹುಡುಕಿ ಕರೆತಂದಿದ್ದಾರೆ. "ಯಾಕಾಗಿ ತಪ್ಪಿಸಿಕೊಂಡೆ?" ಎಂದು ಕೇಳಿದಾಗ ಮೊದಲ ಬಾರಿಗೆ ಮಾತನಾಡಿದ ಆತ "ತನಗೆ ಮನೆಗೆ ಹೋಗಬೇಕೆಂದು" ಎಂದಿದ್ದಾನೆ. ಮಹಾರಾಷ್ಟ್ರದ ನಾರ್ವಾಡ್‌ನಲ್ಲಿ ತಮ್ಮ ಮನೆ, ಕುಟುಂಬ ಇದೆ ಎಂದಿದ್ದಾನೆ.
ತಕ್ಷಣ ವೈಟ್‌ಡೌಸ್ ಸಂಸ್ಥೆ ಅಲ್ಲಿನ ಪೊಲೀಸ್ ಠಾಣೆಗೆ ಕರೆ ಮಾಡಿ ಆತನ ಹೇಳಿಕೆಯಂತೆ ಮನೆಯ ಕುರುಹು ತಿಳಿಸಿದ್ದಾರೆ. ಈ ಜಾಡು ಹಿಡಿದು ಮಹಾರಾಷ್ಟ್ರ ಪೊಲೀಸರು ಕೇವಲ ಒಂದೂವರೆ ಗಂಟೆಯಲ್ಲಿ ಆತನ ಮನೆಯವರನ್ನು ಹುಡುಕಿ ಫೋನ್ ಮಾಡಿಸಿದ್ದಾರೆ. ಆಗಲೇ ಗೊತ್ತಾದದ್ದು ಆತನ ಹೆಸರು ಭಗವಾನ್ ಬುರ್ಕೆ, ಮದುವೆಯಾಗಿ ಮಕ್ಕಳಿದೆ. ಮೊದಲೊಮ್ಮೆ ತಪ್ಪಿಸಿ ಗುಜರಾತ್‌ನಲ್ಲಿ ಸಿಕ್ಕಿದ್ದ. ಇದೀಗ ಮತ್ತೆ ತಪ್ಪಿಸಿ ಎರಡು ವರ್ಷಗಳಾಗಿತ್ತು. ಭಗವಾನ್ ಮತ್ತೆ ಸಿಕ್ಕುವುದೇ ಇಲ್ಲ ಎಂದು ಅಂದುಕೊಂಡಿದ್ದ ಮನೆಯವರಿಗೆ ಇದೀಗ ಆತ ಪತ್ತೆಯಾಗಿರುವುದು ಸಂತಸ ತಂದಿದೆ. ಅದೇ ದಿನ ಕಾರು ಮಾಡಿ ಮಹಾರಾಷ್ಟ್ರದಿಂದ ಮಂಗಳೂರಿಗೆ ಬಂದು ಆತನನ್ನು ಮನೆಗೆ ಕರೆದೊಯ್ದಿದ್ದಾರೆ. ಒಟ್ಟಿನಲ್ಲಿ ಭಗವಾನ್ ಮತ್ತೆ ಮನೆಯವರನ್ನು ಸೇರಿದ್ದು, ಕುಟುಂಬದೊಂದಿಗೆ ಉತ್ತಮ ಜೀವನ ನಡೆಸಲಿ ಎಂಬುದೇ ನಮ್ಮ ಆಶಯ.
PublicNext
22/04/2026 10:27 pm