ಚಿಕ್ಕಮಗಳೂರು: ರಾಜ್ಯ ಸರ್ಕಾರವು ಬಂಜಾರ ಸಮುದಾಯಕ್ಕೆ ಅನ್ಯಾಯ ಎಸಗಿದೆ ಎಂದು ಘೋರ್ ಮಳಾವ್ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ನಾಯ್ಕ್ ಆರೋಪಿಸಿದ್ದಾರೆ. ಬಾಗಲಕೋಟೆ ಉಪಚುನಾವಣೆಯ ಸಂದರ್ಭದಲ್ಲಿ ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.
ಮಾಧುಸ್ವಾಮಿ ವರದಿಯ ಅನ್ವಯ ನೀಡಲಾಗಿದ್ದ ಶೇ. 4.5 ಒಳ ಮೀಸಲಾತಿಯಲ್ಲಿ ಶೇ. 1ರಷ್ಟು ಪಾಲನ್ನು ಅಲೆಮಾರಿಗಳಿಗೆ ನೀಡಿ, ಬಂಜಾರ ಸಮುದಾಯಕ್ಕೆ ಕೇವಲ ಶೇ. 3.5ರಷ್ಟು ಮಾತ್ರ ಉಳಿಸಿರುವುದು ಅನ್ಯಾಯದ ಪರಮಾವಧಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮುದಾಯಕ್ಕೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಿಂದ ಬಂಜಾರರು ಬಿಜೆಪಿಯ 42-43 ಶಾಸಕರನ್ನು ಸೋಲಿಸಿ ಕಾಂಗ್ರೆಸ್ ಅನ್ನು ಬೆಂಬಲಿಸಿದ್ದರು, ಆದರೆ ಈಗ ಅದೇ ಸರ್ಕಾರ ಸಮುದಾಯವನ್ನು ಕಡೆಗಣಿಸಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದ 3,600 ತಾಂಡಾಗಳಲ್ಲಿ 'ಕಾಂಗ್ರೆಸ್ ಹಠಾವೋ, ತಾಂಡಾ ಬಚಾವೋ' ಎಂಬ ಸ್ಲೋಗನ್ ಅಡಿಯಲ್ಲಿ ಬೋರ್ಡ್‌ಗಳನ್ನು ಹಾಕುವ ಮೂಲಕ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಕಾಫಿ ತೋಟಗಳಲ್ಲಿ ಮತ್ತು ರಸ್ತೆ ಕಾಮಗಾರಿಗಳಲ್ಲಿ ಕಷ್ಟಪಟ್ಟು ದುಡಿಯುವ ಬಂಜಾರ ಸಮುದಾಯದ ಮಕ್ಕಳಿಗೆ ಇಂದು ಹಾಸ್ಟೆಲ್ ಸೀಟುಗಳು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಸಮುದಾಯದ ಬಡತನ ಮತ್ತು ಶೈಕ್ಷಣಿಕ ಹಿನ್ನಡೆಯನ್ನು ಎತ್ತಿ ತೋರಿಸಿದ್ದಾರೆ. ಈ ಅನ್ಯಾಯದ ವಿರುದ್ಧ ರಾಜ್ಯಾದ್ಯಂತ ಬಂಜಾರ ಸಮುದಾಯ ಸಂಘಟಿತವಾಗಿ ಹೋರಾಟ ನಡೆಸಲಿದೆ ಮತ್ತು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದೆ ಎಂದು ಮಂಜುನಾಥ್ ನಾಯ್ಕ್ ಈ ಸಂದರ್ಭದಲ್ಲಿ ಗುಡುಗಿದ್ದಾರೆ.
PublicNext
25/04/2026 06:03 pm
LOADING...