ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡೂರು: ಕಾಫಿನಾಡಿನ ಈ ಕೋಟೆಯಲ್ಲಿದೆ ರಾಜ್ಯದ 3ನೇ ಅತಿ ದೊಡ್ಡ ಫಿರಂಗಿ!

ಕಡೂರು: ಕಾಫಿನಾಡು ಕೇವಲ ಪ್ರಕೃತಿ ಸೌಂದರ್ಯಕ್ಕೆ ಮಾತ್ರವಲ್ಲದೆ ಐತಿಹಾಸಿಕ ಹೆಜ್ಜೆಗುರುತುಗಳಿಗೂ ಹೆಸರುವಾಸಿಯಾಗಿದೆ.

ಕಡೂರು ತಾಲ್ಲೂಕಿನ ಸಖರಾಯಪಟ್ಟಣದಲ್ಲಿರುವ ಐತಿಹಾಸಿಕ ಕೋಟೆಯು ಗತಕಾಲದ ವೈಭವವನ್ನು ನೆನಪಿಸುವ ಅದ್ಭುತ ತಾಣವಾಗಿದೆ. ಸಖರಾಯಪಟ್ಟಣದ ಊರಿನ ಮಧ್ಯಭಾಗದಲ್ಲಿರುವ ಈ ಕೋಟೆ ಸದ್ಯ ಅವನತಿಯ ಹಂತದಲ್ಲಿದ್ದರೂ, ತನ್ನ ಒಡಲಿನಲ್ಲಿ ರೋಚಕ ಇತಿಹಾಸವನ್ನು ಬಚ್ಚಿಟ್ಟುಕೊಂಡಿದೆ.

ರುಕ್ಮಾಂಗದ ರಾಜ ಮತ್ತು ಸಖರಾಯನ ನೆನಪಿನ ಈ ಊರಿನ ಹೆಸರಿನ ಹಿಂದೆ ಒಂದು ಸುಂದರ ಕಥೆಯಿದೆ. ಸಖರಾಯನು ತನ್ನ ಹಿರಿಯ ಮಗಳನ್ನು ಮದುವೆ ಮಾಡಿಕೊಟ್ಟ ಊರು ಹಿರೇಮಗಳೂರು ಎಂದೂ, ಕಿರಿಯ ಮಗಳನ್ನು ಮದುವೆ ಮಾಡಿಕೊಟ್ಟ ಊರು ಚಿಕ್ಕಮಗಳೂರು ಎಂದೂ ಪ್ರಸಿದ್ಧಿಯಾಗಿದೆ.

ಇತಿಹಾಸದ ದಾಖಲೆಗಳ ಪ್ರಕಾರ, ಈ ಕೋಟೆಯನ್ನು ಸುಮಾರು 1646-47ನೇ ಇಸವಿಯಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತ ಅರಸ ಅರವೀಡು ಶ್ರೀರಂಗರಾಯರು ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತದೆ.

ಈ ಕೋಟೆಯು ಒಂದು ಕಾಲದಲ್ಲಿ ಅತ್ಯಂತ ಸುರಕ್ಷಿತ ತಾಣವಾಗಿತ್ತು.

ಅಂದಿನ ಕಾಲದಲ್ಲಿ ಇಲ್ಲಿ ಚಿನ್ನದ ನಾಣ್ಯಗಳನ್ನು ತಯಾರಿಸುವ ಟಂಕಸಾಲೆ ಇದ್ದಿದ್ದರಿಂದ ಬಿಗಿ ಭದ್ರತೆಗಾಗಿ ಕೋಟೆಯ ಸುತ್ತ ನೀರಿನ ಕಂದಕ ನಿರ್ಮಿಸಿ, ಅದಕ್ಕೆ ಅಯ್ಯನಕೆರೆಯ ನೀರನ್ನು ಹರಿಸಲಾಗುತ್ತಿತ್ತು. ಈ ಕೋಟೆಯ ಮತ್ತೊಂದು ವಿಶೇಷವೆಂದರೆ ಇದರ ಮೇಲಿರುವ ಬೃಹತ್ ಫಿರಂಗಿ.

ಸುಮಾರು 19 ಅಡಿ ಉದ್ದವಿರುವ ಈ ಫಿರಂಗಿಯು ರಾಜ್ಯದಲ್ಲೇ ಮೂರನೇ ಅತಿ ದೊಡ್ಡ ಫಿರಂಗಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಿಜಾಪುರದಲ್ಲಿರುವ ಫಿರಂಗಿಗಳ ನಂತರದ ಸ್ಥಾನ ಇದಕ್ಕೆ ಸಲ್ಲುತ್ತದೆ. ಶತ್ರುಗಳ ಸಂಹಾರಕ್ಕೆ ಬಳಸುತ್ತಿದ್ದ ಈ ಭಾರೀ ಗಾತ್ರದ ಫಿರಂಗಿಯನ್ನು ಅಂದಿನ ಕಾಲದಲ್ಲಿ ಕೋಟೆಯ ಮೇಲ್ಭಾಗಕ್ಕೆ ಹೇಗೆ ಕೊಂಡೊಯ್ಯಲಾಯಿತು ಎಂಬುದು ಇಂದಿಗೂ ವಿಸ್ಮಯವಾಗಿ ಉಳಿದಿದೆ. ಇಂತಹ ಇತಿಹಾಸ ಪ್ರಸಿದ್ಧ ಕೋಟೆಯು ಇಂದು ರಕ್ಷಣೆಯಿಲ್ಲದೆ ಸೊರಗುತ್ತಿರುವುದು ಇತಿಹಾಸ ಪ್ರೇಮಿಗಳಲ್ಲಿ ವಿಷಾದ ಮೂಡಿಸಿದೆ.

Edited By : Vinayak Patil
PublicNext

PublicNext

30/04/2026 03:32 pm

Cinque Terre

5.98 K

Cinque Terre

0

ಸಂಬಂಧಿತ ಸುದ್ದಿ