ಚಿಕ್ಕಮಗಳೂರು: ಯಗಚಿ ಹಳ್ಳಕ್ಕೆ ಕೊಳಚೆ ನೀರು ಸೇರುತ್ತಿರುವ ಗಂಭೀರ ಸಮಸ್ಯೆ ಈಗ ರಾಷ್ಟ್ರಮಟ್ಟದ ಗಮನ ಸೆಳೆದಿದೆ.
ಚಿಕ್ಕಮಗಳೂರಿನ ರಾಮೇಶ್ವರ ಬಡಾವಣೆಯಲ್ಲಿರುವ ಈ ಹಳ್ಳದ ನೀರು ನೇರವಾಗಿ ಯಗಚಿ ಡ್ಯಾಂ ಸೇರುತ್ತಿದ್ದು, ಕುಡಿಯುವ ನೀರು ಕಲುಷಿತಗೊಳ್ಳುತ್ತಿರುವ ಬಗ್ಗೆ ಸ್ಥಳೀಯರಲ್ಲಿ ತೀವ್ರ ಆತಂಕ ಮನೆಮಾಡಿದೆ.
ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಪತ್ರಕರ್ತ ದಿನೇಶ್ ಪಟವರ್ಧನ್ ಪ್ರಧಾನಿ ಕಚೇರಿಗೆ ಪತ್ರ ಬರೆದು ದೂರು ನೀಡಿದ್ದರು.
ಈ ದೂರಿಗೆ ತಕ್ಷಣ ಸ್ಪಂದಿಸಿರುವ ಪ್ರಧಾನಿ ಕಚೇರಿಯು, ಕೂಡಲೇ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (KSPCB) ಕಟ್ಟುನಿಟ್ಟಿನ ಸೂಚನೆ ನೀಡಿದೆ.
ನಗರದ ರಾಮೇಶ್ವರ ದೇವಸ್ಥಾನದ ಸಮೀಪವೇ ಈ ಕೊಳಚೆ ನೀರು ಹರಿಯುತ್ತಿರುವುದರಿಂದ ಇಡೀ ಪ್ರದೇಶದಲ್ಲಿ ದುರ್ವಾಸನೆ ಹರಡಿದ್ದು, ಪರಿಸರ ಮಾಲಿನ್ಯ ಉಂಟಾಗಿದೆ. ಇದರಿಂದಾಗಿ ದೇವಸ್ಥಾನಕ್ಕೆ ಬರುವ ಭಕ್ತರು ಹಾಗೂ ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಕಲುಷಿತ ನೀರಿನಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದ್ದು, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಯಗಚಿ ಹಳ್ಳವನ್ನು ತಕ್ಷಣ ಸ್ವಚ್ಛಗೊಳಿಸಬೇಕೆಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಕಚೇರಿಯ ಮಧ್ಯಪ್ರವೇಶದಿಂದಾಗಿ ಈಗಲಾದರೂ ಹಳ್ಳಕ್ಕೆ ಮುಕ್ತಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.
PublicNext
26/04/2026 01:36 pm
LOADING...