ಶೃಂಗೇರಿ: ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ನಡೆದಿದ್ದ ದೊಡ್ಡ ಎಡವಟ್ಟು ಈಗ ಬೆಳಕಿಗೆ ಬಂದಿದೆ. ಶೃಂಗೇರಿಯ ರಾಮದತ್ತ ಶರ್ಮಾ ಎಂಬ ವಿದ್ಯಾರ್ಥಿ ಇಂಗ್ಲಿಷ್ ವಿಷಯದಲ್ಲಿ 72 ಅಂಕಗಳನ್ನು ಗಳಿಸಿದ್ದರೂ, ಕಂಪ್ಯೂಟರ್ ಆಪರೇಟರ್ ಮಾಡಿದ ತಪ್ಪು ನಮೂದಿನಿಂದಾಗಿ ಕೇವಲ 28 ಅಂಕಗಳು ಮಾತ್ರ ಪ್ರಕಟವಾಗಿದ್ದವು. ತಾನು ಪರೀಕ್ಷೆ ಚೆನ್ನಾಗಿ ಬರೆದಿದ್ದರೂ ಇಷ್ಟು ಕಡಿಮೆ ಅಂಕ ಬಂದಿದ್ದನ್ನು ಕಂಡು ವಿದ್ಯಾರ್ಥಿ ಕಂಗಾಲಾಗಿದ್ದನು.
ಈ ಸಂದರ್ಭದಲ್ಲಿ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿದ್ದ ಶಿಕ್ಷಕರು, ಫಲಿತಾಂಶದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸ್ಕ್ಯಾನ್ ಪ್ರತಿ ಬರುವವರೆಗೂ ಧೈರ್ಯದಿಂದ ಇರುವಂತೆ ವಿದ್ಯಾರ್ಥಿಗೆ ಸಾಂತ್ವನ ಹೇಳಿದ್ದರು. ಇಂದು ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿ ಬಂದಾಗ ಶಿಕ್ಷಕರ ಅನುಮಾನ ನಿಜವಾಗಿದ್ದು, ಮೌಲ್ಯಮಾಪನ ಮಂಡಳಿಯ ಎಡವಟ್ಟು ಬಹಿರಂಗವಾಗಿದೆ. ವಿದ್ಯಾರ್ಥಿ ವಾಸ್ತವವಾಗಿ 72 ಅಂಕಗಳನ್ನು ಪಡೆದಿರುವುದು ದೃಢಪಟ್ಟಿದ್ದು, ಅನ್ಯಾಯಕ್ಕೊಳಗಾಗಿದ್ದ ರಾಮದತ್ತ ಶರ್ಮಾ ಮತ್ತು ಆತನ ಕುಟುಂಬದವರು ಈಗ ನಿಟ್ಟುಸಿರು ಬಿಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಮಂಡಳಿಯು ಈ ತಾಂತ್ರಿಕ ದೋಷವನ್ನು ಸರಿಪಡಿಸಿ ಅಧಿಕೃತವಾಗಿ ಅಂಕಗಳನ್ನು ಪರಿಷ್ಕರಿಸುವ ನಿರೀಕ್ಷೆಯಿದೆ.
PublicNext
27/04/2026 02:22 pm
LOADING...