ತರೀಕೆರೆ: ಸರಣಿ ಮನೆ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ತರೀಕೆರೆ ಉಪ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದು, ಅಂತರಜಿಲ್ಲಾ ಕಳ್ಳರ ತಂಡವನ್ನು ಬಂಧಿಸಿ ಸುಮಾರು 32.74 ಲಕ್ಷ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರಂಗೇನಹಳ್ಳಿಯ ಪ್ರೇಮ ಎಂಬುವರ ಮನೆಯ ಬೀಗ ಮುರಿದು ಚಿನ್ನಾಭರಣ ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡ ಪೊಲೀಸರು, ತಾಂತ್ರಿಕ ವಿಭಾಗದ ಸಹಯೋಗದೊಂದಿಗೆ ಕಾರ್ಯಾಚರಣೆ ನಡೆಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಮೂಲದ ಗಂಗಾಧರ (35) ಮತ್ತು ತುಮಕೂರು ಜಿಲ್ಲೆ ಕೊರಟಗೆರೆಯ ಬಸವರಾಜ್ (26) ಎಂಬುವರನ್ನು ದಸ್ತಗಿರಿ ಮಾಡಿದ್ದಾರೆ.
ಬಂಧಿತ ಆರೋಪಿಗಳು ಮಧುಗಿರಿಯ ಕಿರಣ್ ಎಂಬಾತನ ಜೊತೆ ಸೇರಿ ಕಾರುಗಳಲ್ಲಿ ಸಂಚರಿಸುತ್ತಾ, ಬೀಗ ಹಾಕಿದ ಮನೆಗಳನ್ನು ಗುರುತಿಸಿ ಹೈಡ್ರಾಲಿಕ್ ಕಟರ್ ಹಾಗೂ ಕಬ್ಬಿಣದ ರಾಡ್‌ಗಳನ್ನು ಬಳಸಿ ಕಳ್ಳತನ ಮಾಡುತ್ತಿದ್ದರು.
ಈ ತಂಡವು ಲಕ್ಕವಳ್ಳಿಯ ಸಿರಿಮನೆ ಬಾರ್ ಅಂಡ್ ರೆಸ್ಟೋರೆಂಟ್, ಕಡೂರಿನ ಪ್ರವೀಣ್ ಕುಮಾರ್ ಎಂಬುವರ ಮನೆ ಹಾಗೂ ಚಿಕ್ಕಮಗಳೂರು ನಗರದ ಕಲ್ಯಾಣನಗರದಲ್ಲಿ ಯಶ್ವಂತ್ ಎಂಬುವರ ಮನೆಯಲ್ಲಿ ನಡೆಸಿದ್ದ ಕಳ್ಳತನಗಳನ್ನು ಒಪ್ಪಿಕೊಂಡಿದ್ದು, ಒಟ್ಟು ನಾಲ್ಕು ಪ್ರಕರಣಗಳು ಪತ್ತೆಯಾಗಿವೆ.
ಆರೋಪಿಗಳಿಂದ 22.20 ಲಕ್ಷ ರೂಪಾಯಿ ಮೌಲ್ಯದ 160 ಗ್ರಾಂ ಚಿನ್ನಾಭರಣ, ಬೆಳ್ಳಿ ನಾಣ್ಯ, 50,000 ರೂಪಾಯಿ ನಗದು ಹಣ, ಕೃತ್ಯಕ್ಕೆ ಬಳಸಿದ್ದ 10 ಲಕ್ಷ ರೂಪಾಯಿ ಮೌಲ್ಯದ ಟಾಟಾ ಆಸ್ಟ್ರೀಜ್ ಕಾರು ಹಾಗೂ ಹೈಡ್ರಾಲಿಕ್ ಸ್ಟೀಲ್ ಕಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
PublicNext
28/04/2026 01:36 pm
LOADING...