ಕುಂದಾಪುರ: ಹಳೆಯ ಸಾಲದ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು, ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ದುರುಪಯೋಗಪಡಿಸಿಕೊಂಡಿದ್ದಲ್ಲದೇ ಅಕ್ರಮ ವಸೂಲಾತಿ ಮಾಡುತ್ತಿದ್ದಾರೆ ಎಂಬ ಆರೋಪದೊಂದಿಗೆ ಬಾರ್ಕೂರಿನ ಸರ್ವೋದಯ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಲಿಮಿಟೆಡ್ ಸಂಸ್ಥೆಯ ಮೂವರ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹರೀಶ್ ಕಾರಂತ್, ನಿತ್ಯಾನಂದ ಕಾಮತ್, ಬಾಬು ರಾಜೇಂದ್ರ ಪ್ರಸಾದ್ ಆರೋಪಿಗಳು. ಹೊಸಾಳ ಗ್ರಾಮದ ಎಸ್. ಬಾಲಕೃಷ್ಣ ಹೆಗ್ಡೆ ಹಾಗೂ ಗಂಗಾಧರ ಹೆಗ್ಡೆ ದೂರುದಾರರು.
ಹರೀಶ್ ಕಾರಂತ್ ಎಂಬುವರು ಸರ್ವೋದಯ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಲಿಮಿಟೆಡ್ ನಲ್ಲಿ ಜೆಸಿಬಿ ಯಂತ್ರ ಖರೀದಿಸಲು ಸಾಲ ಪಡೆದಿದ್ದು, ಬಳಿಕ ನಿತ್ಯಾನಂದ ಕಾಮತ್, ಬಾಬು ರಾಜೇಂದ್ರ ಪ್ರಸಾದ್ ಸಾಲದ ಪ್ರಸ್ತಾವನೆಗೆ ಸಂಬಂಧಿಸಿದ ದಾಖಲೆಗಳಿಗೆ ಎಸ್. ಬಾಲಕೃಷ್ಣ ಹೆಗ್ಡೆ ಹಾಗೂ ಗಂಗಾಧರ ಹೆಗ್ಡೆಯವರಿಂದ ಕೇವಲ ಗುರುತು-ಸಾಕ್ಷಿಗಳಾಗಿ (ಜಾಮೀನುದಾರರಾಗಿ)ಸಹಿ ಪಡೆಯುವ ನೆಪದಲ್ಲಿ ಮೋಸ ಪೂರಿತವಾಗಿ ಸಹಿಗಳನ್ನು ಪಡೆದುಕೊಂಡಿದ್ದರು. ವಾಸ್ತವದಲ್ಲಿ ಪಿರ್ಯಾದಿದಾರರನ್ನು ಜಾಮೀನುದಾರರಾಗಿ ತೋರಿಸುವ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸುಳ್ಳು ಪ್ರತಿನಿಧಾನಗಳ ಮೂಲಕ ವಂಚನೆ ನಡೆಸಲಾಗಿದೆ.
ಬಳಿಕ ಸಹಕಾರ ಸಂಘಗಳ ಜಿಲ್ಲಾ ರಿಜಿಸ್ಟ್ರಾರ್ ಮುಂದೆ ಹರೀಶ್ ಕಾರಂತ್, ಸುಳ್ಳು ಮಾಹಿತಿಗಳನ್ನು ನೀಡುವ ಮೂಲಕ ಏಕಪಕ್ಷೀಯ ತೀರ್ಪು ಪಡೆಯಲಾಗಿತ್ತು ಮತ್ತು ಸುಮಾರು ರೂ.33,89,899 ವಸೂಲಾತಿಗಾಗಿ ಎಸ್. ಬಾಲಕೃಷ್ಣ ಹೆಗ್ಡೆ ಹಾಗೂ ಗಂಗಾಧರ ಹೆಗ್ಡೆಯವರ ವಿರುದ್ಧ ಯಾವುದೇ ಸಾಲ ಪಡೆಯದೆ ಇದ್ದರೂ ಅವರನ್ನು ಹೊಣೆಗಾರರನ್ನಾಗಿ ತೋರಿಸಿ ಎಕ್ಸಿಕ್ಯೂಶನ್ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ, ಅಡಮಾನವಿಟ್ಟ ಜೆಸಿಬಿ ಕ್ರೇನನ್ನು ಆರೋಪಿಗಳು ಅಕ್ರಮವಾಗಿ ಮಾರಾಟ ಮಾಡಿ, ಭದ್ರತಾ ಆಸ್ತಿಯನ್ನು ನಾಶಪಡಿಸಿ, ಸಾಲದ ಷರತ್ತುಗಳನ್ನು ಉಲ್ಲಂಘಿಸಿ ಆ ಹಣವನ್ನು ಸಾಲದ ಖಾತೆಗೆ ಜಮಾ ಮಾಡದೆ ದುರುಪಯೋಗಪಡಿಸಿಕೊಂಡಿದ್ದಾರೆ.
ನೈಜ ಜಾಮೀನುದಾರಳಾದ ಬಾಬು ರಾಜೇಂದ್ರ ಪ್ರಸಾದ್ ನ ಪತ್ನಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ, ಒಂದೇ ಸಾಲಕ್ಕೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯಗಳಲ್ಲಿ ವಿಭಿನ್ನ ವಸೂಲಾತಿ ಪ್ರಕ್ರಿಯೆಗಳನ್ನು ಆರಂಭಿಸಿ, ಕಾನೂನುಬಾಹಿರವಾಗಿ ಹಣ ಸುಲಿಗೆ ಮಾಡಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ.
ಕಾಲಮಿತಿ ಮೀರಿದ ನಂತರವೂ ದಾವೆ ಹೂಡಿ ನ್ಯಾಯಾಲಯವನ್ನು ತಪ್ಪುದಾರಿಗೆಳೆದು ಸುಳ್ಳು ಹಕ್ಕುಸಾಧನೆ ಮಾಡಲಾಗಿದ್ದು, ಎಸ್. ಬಾಲಕೃಷ್ಣ ಹೆಗ್ಡೆ ಮತ್ತು ಗಂಗಾಧರ ಹೆಗ್ಡೆ ರವರ ಹಿಂದಿನ ಸಾಲದ ಸಮಯದಲ್ಲಿ ಪಡೆದುಕೊಂಡ ಚೆಕ್ಗಳನ್ನು ದುರುಪಯೋಗಪಡಿಸಿಕೊಂಡು ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ನ್ಯಾಯಾಲಯದ ಖಾಸಗಿ ದೂರಿನಂತೆ ಪ್ರಕರಣ ದಾಖಲಾಗಿದೆ.
Kshetra Samachara
28/04/2026 07:57 pm